‘ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ರಾಜ್ಯಾಧ್ಯಕ್ಷನಾಗಬಹುದು’

Nalin Kumar Kateel

27-08-2019

ಬೆಂಗಳೂರು, ಆ 27 ; ನಾನು ವಿದ್ವಾಂಸನಲ್ಲ, ಜ್ಞಾನಿಯೂ ಅಲ್ಲ, ಆದರೆ ಸಂಘದ ಶಾಖೆಯಲ್ಲಿ ಆಡುತ್ತಾ ಬೆಳೆದವನು. ನಾನು ಈ ಎತ್ತರಕ್ಕೆ ಬೆಳೆಯಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರಣ. ಒಬ್ಬ ಸಾಮಾನ್ಯ ಕಾರ್ಯಕರ್ತನೂ ರಾಜ್ಯಾಧ್ಯಕ್ಷನಾಗಬಹುದು ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯ ಮುಂಭಾಗ ಏರ್ಪಡಿಸಿದ್ದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಇವತ್ತು ಸ್ವರ್ಣಯುಗದಲ್ಲಿದೆ. ಇಂತಹ ಕಾಲಘಟ್ಟದಲ್ಲಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಬಹಳ ಎಚ್ಚರಿಕೆಯಿಂದ ಇದನ್ನು ನಿರ್ವಹಿಸುತ್ತೇನೆ‌. ನಾನು ಒಬ್ಬಂಟಿಯಲ್ಲ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಹಾಗೂ ಒಂದು ದೊಡ್ಡ ತಂಡ, ಸಹಸ್ರಾರು ಕಾರ್ಯಕರ್ತರು ನನ್ನ ಬೆನ್ನಿಗಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಬರ ಮತ್ತು ನೆರೆ ಪರಿಸ್ಥಿತಿಯಲ್ಲಿ ಸಂತ್ರಸ್ತರ ಕಣ್ಣೊರೆಸುವ ಕೆಲಸದಲ್ಲಿ ಯಡಿಯೂರಪ್ಪನವರಿಗೆ ಬಿಜೆಪಿ ಕೈ ಜೋಡಿಸಲಿದೆ . ಪಕ್ಷದ ಪ್ರಮುಖರು ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಯಡಿಯೂರಪ್ಪ ಮತ್ತು ಅವರ ಇಡೀ ತಂಡದ ಸಲಹೆ ಮಾರ್ಗದರ್ಶನ ಪಡೆದು ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪ್ರವಾಹ ಸಂತ್ರಸ್ತರ ಪುನರ್ವಸತಿ ನಮಗೆ ದೊಡ್ಡ ಸವಾಲು. ಇಂದು ಚಿಕ್ಕಮಗಳೂರಿಗೆ ತೆರಳಿ ಅತಿವೃಷ್ಟಿ ಹಾನಿ ಪರಿಶೀಲನೆ ಮಾಡುತ್ತೇನೆ. ನಾಳೆ ನಾಡಿದ್ದು ಮತ್ತಷ್ಟು ಪ್ರದೇಶಗಳಿಗೆ ತೆರಳುತ್ತೇನೆ‌. ಸಂತ್ರಸ್ತರಿಗೆ ನೆರವು ನೀಡಬೇಕಾದುದು ನಮ್ಮ ಕರ್ತವ್ಯ ಎಂದರು.
ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಕೇಂದ್ರದ ಅಧಿಕಾರಿಗಳ ತಂಡವೂ ಸಹ ಪರಿಸ್ಥಿತಿ ಪರಿಶೀಲನೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹೆಚ್ಚಿನ ನೆರವು ಸಿಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಸಾರ್ವಜನಿಕರು,ಕೈಗಾರಿಕೋದ್ಯಮಿಗಳು,ಸರ್ಕಾರಿ ನೌಕರರು ದೊಡ್ಡ ಮಟ್ಟದಲ್ಲಿ ಹಣಕಾಸು ಸಹಾಯ ಮಾಡಿದ್ದಾರೆ ಎಂದರು.
ನಳೀನ್ ಕುಮಾರ್ ಕಟೀಲ್ ಭಾಷಣ ಆರಂಭಿಸುತ್ತಲೇ ವೇದಿಕೆಯಿಂದ ಸಚಿವ ಕೆ.ಎಸ್.ಈಶ್ವರಪ್ಪ ನಿರ್ಗಮಿಸಿದರು.
ಪದಗ್ರಹಣ ಕಾರ್ಯಕ್ರಮಕ್ಕೆ ಕೇಸರಿ ಉಡುಪಿನಲ್ಲಿ‌ ಕಟೀಲ್ ಆಗಮಿಸಿದ್ದರು. ಇದಕ್ಕೂ ಮೊದಲು ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ರಾಜ್ಯ ಕಚೇರಿಗೆ ಕರೆ ತರಲಾಯಿತು.
ಸಚಿವ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಗೈರು ಹಾಜರಿ ಕಂಡುಬಂತು.


ಸಂಬಂಧಿತ ಟ್ಯಾಗ್ಗಳು

BS Yediyurappa Nalin Kumar Kateel BJP RSS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ