ಅತೃಪ್ತಿ ಶಮನಕ್ಕೆ ಯತ್ನ : ನಾಳೆ ಮತ್ತೆ ಸಂಪುಟ ವಿಸ್ತರಣೆ

BS Yediyurappa Cabinet

26-08-2019

ಬೆಂಗಳೂರು: ಸಚಿವ ಸ್ಥಾನ ಸಿಗದೆ ಕೆಲವು ಶಾಸಕರು ಅಸಮಾಧಾನ ಗೊಂಡಿರುವ ಹಿನ್ನೆಲೆಯಲ್ಲಿ ನಾಳೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡಲಿದ್ದು, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ನವದೆಹಲಿ ಪ್ರವಾಸದಲ್ಲಿದ್ದ ಯಡಿಯೂರಪ್ಪ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ವೇಳೆ ಸಚಿವ ಸಂಪುಟ ರಚನೆಯಾದ ನಂತರ ನಡೆದಿರುವ ರಾಜಕೀಯ ವಿದ್ಯಮಾನಗಳನ್ನು ವರಿಷ್ಟರ ಗಮನಕ್ಕೆ ತಂದಿದ್ದಾರೆ.
ಶಾಸಕರು ಅಸಮಾಧಾನಗೊಂಡಿದ್ದಾರೆ. ಅವರ ಮನವೊಲಿಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಾರಂಭದ ಹಂತದಲ್ಲೇ ಭಿನ್ನಮತವನ್ನು ಚಿವುಟಿ ಹಾಕದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಭಿನ್ನಮತೀಯರು ಹೇಗೆ ಕಾರಣರಾದರೋ ಅದೇ ರೀತಿ ನಮ್ಮ ಪಕ್ಷದಲ್ಲಿರುವ ಕೆಲವರು ಕಾರಣವಾಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಹಿರಿಯರನ್ನು ಹಾಗೂ ಪಕ್ಷ ನಿಷ್ಟರನ್ನು ಸಂಪುಟದಿಂದ ಕೈ ಬಿಟ್ಟಿರುವುದರಿಂದ ಕೆಲವರು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದು ಭವಿಷ್ಯದ ದಿನಗಳಲ್ಲಿ ನಮಗೆ ಮುಳುವಾಗುವ ಸಾಧ್ಯತೆ ಇದೆ. ಕೂಡಲೇ ಅಸಮಾಧಾನಗೊಂಡಿರುವವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ವರಿಷ್ಟರಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ವರಿಷ್ಟರು ಪರಿಸ್ಥಿತಿಗೆ ಅನುಗುಣವಾಗಿ ಹಾಗೂ ಸಮಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದರೆ ಸಂಪುಟ ವಿಸ್ತರಣೆ ಮಾಡಿಕೊಳ್ಳಿ. ಆದರೆ, ಎಲ್ಲಿಯೂ ಬಂಡಾಯ, ಭಿನ್ನಮತಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ಯ ಹೆಜ್ಜೆ ಇಡಬೇಕೆಂದು ಸಲಹೆ ಮಾಡಿದ್ದಾರೆ.
ವರಿಷ್ಠರಿಂದ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಈ ಬಾರಿ ಹಿರಿಯರಾದ ಉಮೇಶ್‍ಕತ್ತಿ, ಅರವಿಂದ್ ಲಿಂಬಾವಳಿ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ.


ಸಂಬಂಧಿತ ಟ್ಯಾಗ್ಗಳು

BS Yediyurappa BJP Cabinet Umesh Katti


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ