ಕೇಂದ್ರದ ಅನುದಾನ ‘ಬರ’ ಪರಿಹಾರಕ್ಕಾಗಿ : ಗೌಡರ ಹೊಸ ಬಾಂಬ್

HD Devegowda Statement

21-08-2019

ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬರಗಾಲಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಕೋರಿಕೆಗೆ ಪೂರಕವಾಗಿ ಕೇಂದ್ರ ಸರ್ಕಾರ 1029 ಕೋಟಿ ರೂ ಪರಿಹಾರ ನೀಡಿದೆಯೇ ಹೊರತು ಈ ಬಾರಿಯ ಜಲಪ್ರಳಯದ ಪರಿಹಾರ ಕಾಮಗಾರಿಗಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಈ ಬಾರಿಯ ನೆರೆಗೆ ' ನಾಟ್ ಎ ರುಪಿ ' ಕೂಡ ಕೇಂದ್ರ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಯಾವುದೋ ಪರಿಹಾರಕ್ಕೆ ಇನ್ಯಾವುದೋ ಕತೆ ಜೋಡಿಸುವುದು ಬೇಡ ಎಂದು ಹೇಳಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನರೇಗ ಯೋಜನೆಯಡಿ 1700 ಕೋಟಿ ರೂ. ಕೇಂದ್ರ ಸರ್ಕಾರ  ಕೊಡಬೇಕು. ಅದನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

ಹಿಂದೆ ಕುಮಾರಸ್ವಾಮಿ ಅವರು ಕೂಲಿ ಕಾರ್ಮಿಕರಿಗೆ ತೊಂದರೆ ಇದೆ ಅಂತಾ ಆ ಹಣವನ್ನೂ ರಾಜ್ಯ ಸರ್ಕಾರದ ಮೂಲಕವೇ ಕೊಟ್ಟಿದ್ದಾರೆ ಎಂದರು. ಕೇಂದ್ರದಿಂದ ನೆರೆ ಪರಿಹಾರಕ್ಕೆ 2029 ಕೋಟಿ ರೂ. ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಈ ಬಾರಿಯ ನೆರೆ ಅನಾಹುತಕ್ಕೆ ಕೇಂದ್ರ ಸರ್ಕಾರ ಒಂದು ನಯಾಪೈಸೆ ಕೂಡ ಕೇಂದ್ರ ಕೊಟ್ಟಿಲ್ಲ ಎಂದು ಬಾಂಬ್ ಸಿಡಿಸಿದರು.

ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸುಮಾರು 100 ತಾಲ್ಲೂಕುಗಳಲ್ಲಿ ಬರ ಬಂದಿತ್ತು. ಕುಡಿಯೋದಕ್ಕೆ ನೀರು ಇಲ್ಲದಂತ ಕಾಲದಲ್ಲಿ ಪರಿಹಾರ ಕೊಡಬೇಕೆಂದು 3 ಸಾವಿರ ಕೋಟಿ ರೂ. ಪರಿಹಾರಕ್ಕೆ ಮೈತ್ರಿ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿತ್ತು.

 ಹೀಗೆ ಲೋಕಸಭೆ ಚುನಾವಣೆಗೆ ಮುಂಚೆ ಮೈತ್ರಿ ಸರ್ಕಾರದ ಮನವಿ ಮೇರೆಗೆ 1029 ಕೋಟಿ ಕೊಟ್ಟಿದ್ದಾರೆ ಅಷ್ಟೇ. ಈ ಬಾರಿಯ ನೆರೆಗೆ ಕೇಂದ್ರ ಸರ್ಕಾರ ಏನೇನು ಕೊಟ್ಟಿಲ್ಲ. ಈಗ ಬಿಡುಗಡೆಯಾಗಿರುವುದು ಹಿಂದಿನ ಬರಗಾಲದ ಪರಿಸ್ಥಿತಿಗೆ ಕೊಟ್ಟಿರುವ ಅನುದಾನ ಎಂದು ಹೇಳಿದರು.

 ಬಿಜೆಪಿಯವರು 25 + 1 ಜನ ಇಲ್ಲಿ  ಗೆದ್ದಿದ್ದಾರೆ. ಬಿಜೆಪಿಯಿಂದ ಏನೋ ಕಡಿದು ಕಟ್ಟೆ ಹಾಕ್ತೀನಿ ಅಂತಾ ಹೇಳಿದ್ದಾರೆ. ಅದು ಈಗಲ್ಲ ಮಾತಾಡೋದು, ಕಾಯುತ್ತೇವೆ. ಹಾಲು ಕಾಯ್ದಷ್ಟು ರುಚಿಯಾಗುತ್ತೆ. ನಾನು  ಸುಮ್ಮನೆ ಕುಳಿತುಕೊಳ್ಳಲ್ಲ ಎಂದು ಮಾರ್ಮಿಕವಾಗಿ ನುಡಿದರು.

ವಾಜಪೇಯಿ ಕಾಲದಲ್ಲಿ 2500 ಜನರನ್ನು  ಕರೆದುಕೊಂಡು ಹೋಗಿದ್ದೆ. ನನಗೆ ಹೋರಾಟ ಗೊತ್ತಿದೆ. ಯಾರಿಗೂ ಹೆದರಬೇಕಿಲ್ಲ. ಭಯಪಡೋ ಅಗತ್ಯ ಇಲ್ಲ ಎಂದರು. ಕಾಂಗ್ರೆಸ್ ಕೆಲವು ಮಿತ್ರರು ಈ ಸರ್ಕಾರ ತೆಗೆಯಬೇಕಂತಲೇ ಇದ್ದರು. ಕುಮಾರಸ್ವಾಮಿ ಆ ಸ್ಥಾನದಲ್ಲಿ ಕೂರೋದನ್ನು  ಕೆಲವರಿಗೆ ನೋಡಕ್ಕೆ ಆಗಿಲ್ಲ ಎಂದು ಕಿಡಿಕಾರಿದರು. ರಾಜ್ಯದ ಪರವಾಗಿ ನೆರೆಗಾಗಿ  ಹೋರಾಟ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪರವಾಗಿ ಅಲ್ಲಿ ಯಾರಪ್ಪ ಇದ್ದಾರೆ. ಮೊಮ್ಮಗನೊಬ್ಬನಿದ್ದಾನೆ ( ಪ್ರಜ್ವಲ್ ) ಅಷ್ಟೇ ಎಂದರು.


ಸಂಬಂಧಿತ ಟ್ಯಾಗ್ಗಳು

H D Devegowda BJP Congress JDS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ