ಸಂಪುಟ ರಚನೆ ಬಗ್ಗೆ ಜೆಡಿಎಸ್ ಹೇಳಿದ್ದೇನು?

JDS reaction about Cabinet

21-08-2019

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪೂರ್ಣ ಪ್ರಮಾಣದ ಸರ್ಕಾರ ನೀಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸೇರಿದಂತೆ 17 ಸದಸ್ಯರ ಸಂಪುಟ ರಚಿಸಿದ್ದಾರೆ. ಆದರೆ ಜನರ ಆಶೋತ್ತರಗಳನ್ನು ತಲುಪಲು ಪೂರ್ಣ ಪ್ರಮಾಣದ ಹಾಗೂ ಎಲ್ಲಾ ವರ್ಗಗಳಿಗೆ, ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಸಂಪುಟ ರಚಿಸಲು ವಿಫಲವಾಗಿದೆ ಎಂದು ಜೆಡಿಎಸ್ ಅಪಾದಿಸಿದೆ.

ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಾರದಿರುವುದರಿಂದ ರಾಜ್ಯದ ಪ್ರಗತಿ ಕುಂಠಿತವಾಗುತ್ತದೆ ಮತ್ತು ಆಡಳಿತ ಯಂತ್ರ ನಿಧಾನವಾಗಲಿದೆ. ಬಿಜೆಪಿ ತಾನು ರಾಜ್ಯದ ಜನರಿಗೆ ನೀಡಿದ ಮಾತಿಗೆ ತಪ್ಪಿದ್ದು, ಈ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಮತ್ತು ಕಾರಣ ನೀಡಬೇಕು ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕ ಶ್ರೀ ಡಿ. ದೇವರಾಜ್ ಅರಸರ 104 ನೇ ಜನ್ಮದಿನದಂದು ಬಿಜೆಪಿ ಮಂತ್ರಿಮಂಡಲ ರಚನೆ ಮಾಡಿದೆ. ಈ ಸಂಪುಟದಲ್ಲಿ ಸ್ವಾಭಾವಿಕವಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚು ಪ್ರಾತಿನಿಧ್ಯ ದೊರೆಯುತ್ತದೆ ಎಂದು ರಾಜ್ಯದ ಜನರು ಬಯಸಿದ್ದರು. ಆದರೆ ಅರಸುರವರಿಗೆ ಅವಮಾನಿಸುವ ರೀತಿಯಲ್ಲಿ ಕೇವಲ ಇಬ್ಬರು ಹಿಂದುಳಿದ ವರ್ಗದವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ಬಿಜೆಪಿ ಕಾರ್ಯಸೂಚಿ ಬಯಲಾಗಿದೆ ಎಂದು ಆಪಾದಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಆರನೇ ಸ್ಥಾನದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೊಂದು ಅವಮಾನಕರ ಸಂಗತಿ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಮಂತ್ರಿ ಪದವಿ ಮೇಲೆ ಇಷ್ಟೊಂದು ವ್ಯಾಮೋಹ ಇರಬಾರದಿತ್ತು. ಇದು ಸಂಘ ಪರಿವಾರದಿಂದ ಕಲಿತದ್ದೋ ಅಥವಾ ಕುಟುಂಬ ಒತ್ತಡದ ಫಲವೋ ಅವರೇ ಖಚಿತಪಡಿಸಬೇಕು ಎಂದು ಆಗ್ರಹಿಸಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Ramesh babu JDS BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ