ನೂತನ ಸಚಿವರ ಗುರಿಗಳೇನು ಗೊತ್ತ?

Karnataka

20-08-2019

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಇದೀಗ ಮಂತ್ರಿಗಳಿಂದ ಲಕಲಕಿಸುತ್ತಿದ್ದು ಅದೇ ಕಾಲಕ್ಕೆ ಪ್ರವಾಹ ಪೀಡಿತರ ನೆರವಿಗೆ ಧಾವಿಸುವುದು, ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕೊಡುವುದು ನಮ್ಮ ಗುರಿ ಎಂದು ಮಿನಿಸ್ಟರ್ಸ್‌ ಬ್ರಿಗೇಡ್‌ ಒಮ್ಮತದಿಂದ ಘೋಷಿಸಿದೆ.
ಮಂತ್ರಿ ಮಂಡಲ ವಿಸ್ತರಣೆ ಯಾವಾಗ ಎಂಬ ಪ್ರಶ್ನೆಯ ನಡುವೆಯೇ ಸಿಎಂ ಯಡಿಯೂರಪ್ಪ ಏಕಾಂಗಿಯಾಗಿ ಇಪ್ಪತ್ತೈದು ದಿನಗಳ ಕಾಲ ಸರ್ಕಾರವನ್ನು ಮುನ್ನಡೆಸಿದ್ದರು.
ಆದರೆ ಇದೀಗ ಮಂತ್ರಿ ಮಂಡಲ ವಿಸ್ತರಣೆಯಾಗಿರುವುದರಿಂದ ಸರ್ಕಾರಕ್ಕೆ ಬಲಬಂದಂತಾಗಿದ್ದು ಅದೇ ಕಾಲಕ್ಕೆ ತೊಂಭತ್ನಾಲ್ಕರ ನಂತರ ಹೆವಿವೇಯ್ಟ್‌ ಗಳನ್ನು ಕಂಡ ಸರ್ಕಾರ ಎಂಬ ಕೀರ್ತಿಗೂ ಯಡಿಯೂರಪ್ಪ ಅವರ ಸರ್ಕಾರ ಭಾಜನವಾಗಿದೆ. ಯಾಕೆಂದರೆ ಮಂತ್ರಿಗಳಾದ ಬಹುತೇಕರು ಈ ಹಿಂದೆಯೂ ಮಂತ್ರಿಗಳಾಗಿ ಅನುಭವ ಗಳಿಸಿದ್ದವರು.ಹೀಗಾಗಿ ಮಂತ್ರಿ ಮಂಡಲದಲ್ಲಿ ಅನುಭವಿಗಳ ಸಂಖ್ಯೆಯೇ ಹೆಚ್ಚಿದೆ. ಹಾಗೆಯೇ ಹೊಸಬರು ಕೂಡಾ ಸ್ಥಾನ ಪಡೆದಿದ್ದಾರೆ.
ತೊಂಭತ್ನಾಲ್ಕರಲ್ಲಿ ದೇವೇಗೌಡರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರ ಕೂಡಾ ಘಟಾನುಘಟಿಗಳನ್ನು ಹೊಂದಿತ್ತಲ್ಲದೆ ಹೊಸಬರಿಗೂ ಗಣನೀಯ ಪ್ರಮಾಣದಲ್ಲಿ ಸ್ಥಾನ ನೀಡಿತ್ತು.
ಇದೀಗ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಕೂಡಾ ಘಟಾನುಘಟಿ ನಾಯಕರಿಂದ ತುಂಬಿಕೊಳ್ಳತೊಡಗಿದ್ದು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ್‌, ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ,ಆರ್.ಅಶೋಕ್ ಸೇರಿದಂತೆ ಹಲ ಪ್ರಭಾವಿ ನಾಯಕರನ್ನು ಒಳಗೊಂಡಿದೆ. ಹೀಗೆ ಮಂತ್ರಿ ಮಂಡಲ ವಿಸ್ತರಣೆಯಾಗುತ್ತಿದ್ದಂತೆಯೇ ಮಾಧ್ಯಮಗಳ ಜತೆ ಮಾತನಾಡಿದ ಎಲ್ಲ ನಾಯಕರು,ರಾಜ್ಯದಲ್ಲಿ ಸಂಭವಿಸಿದ ಜಲಪ್ರಳಯದಿಂದ ಜನ ನೊಂದಿದ್ದು ಈ ಹಿನ್ನೆಲೆಯಲ್ಲಿ ಅವರಿಗೆ ಶಕ್ತಿ ತುಂಬುವುದೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.
ವರಿಷ್ಟರು ನಮ್ಮನ್ನು ಗುರುತಿಸಿ ಮಂತ್ರಿಗಳಾಗಲು ಅವಕಾಶ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅದೇ ರೀತಿ ನಮ್ಮಿಂದ ಯಾವ ಮಟ್ಟದಲ್ಲಿ ಕೆಲಸವಾಗಬೇಕು ಎಂದು ಅವರು ಬಯಸಿದ್ದಾರೋ? ಅದನ್ನು ನಿಶ್ಚಿತವಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಮಧ್ಯೆ ರಾಜ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದನ್ನು ಪರಿಹರಿಸುವುದು ನಮ್ಮ ಆದ್ಯತೆ ಎಂದಿರುವ ನೂತನ ಸಚಿವರು,ತದ ನಂತರ ನಡೆದ ಔಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Flood Cabinet Oath


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ