ಯಡಿಯೂರಪ್ಪ ಸಂಪುಟಕ್ಕೆ 17 ಮಂದಿ ಸೇರ್ಪಡೆ

Karnataka gets 17 new ministers

20-08-2019

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಕೊನೆಗೂ ಸಚಿವರ ಬರದಿಂದ ಮುಕ್ತವಾಗಿದ್ದು ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್.ಈಶ್ವರಪ್ಪ,ಆರ್‌,ಅಶೋಕ್‌,ಗೋವಿಂದ ಕಾರಜೋಳ, ವಿ.ಸೋಮಣ್ಣ ಸೇರಿದಂತೆ ಹದಿನೇಳು ಮಂದಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ ೧೦:೩೦ ಕ್ಕೆ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ನೂತನ ಸಚಿವರಿಗೆ ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಿದರು. ಮಂತ್ರಿ ಮಂಡಲಕ್ಕೆ ಜಗದೀಶ್‌ ಶೆಟ್ಟರ್‌, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ್‌, ವಿ.ಸೋಮಣ್ಣ, ಸುರೇಶ್‌ ಕುಮಾರ್‌ ಸೇರ್ಪಡೆಯಾಗಿದ್ದಾರೆ.
ಹಾಗೆಯೇ ನಾಗೇಶ್‌, ಪ್ರಭುಔಹಾಣ್‌, ಸಿ.ಟಿ.ರವಿ, ಅಶ್ವಥ್ಥ ನಾರಾಯಣ್‌, ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್‌, ಕೋಟ ಶ್ರೀನಿವಾಸ ಪೂಜಾರಿ ಸೇರ್ಪಡೆಯಾಗಿದ್ದಾರೆ. ಇದೇ ಕಾಲಕ್ಕೆ ಯಡಿಯೂರಪ್ಪ ಸರ್ಕಾರದ ಪಾಲಿಗೆ ಟ್ರಬಲ್‌ ಶೂಟರ್‌ ಎನ್ನಿಸಿಕೊಂಡಿರುವ ಜೆ.ಸಿ.ಮಾಧುಸ್ವಾಮಿ ಹಾಗೂ ಲಕ್ಷ್ಮಣ ಸವದಿ ಅವರು ನೂತನ ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ಸಚಿವ ಸಂಪುಟಕ್ಕೆ ಲಿಂಗಾಯತ ಸಮುದಾಯದ ಏಳು ಮಂದಿ, ದಲಿತ ಸಮುದಾಯದ ನಾಲ್ಕುಮಂದಿ, ಒಕ್ಕಲಿಗ ಸಮುದಾಯದ ಮೂರು ಮಂದಿ ಅವಕಾಶ ಪಡೆದಿದ್ದರೆ ಉಳಿದಂತೆ ಕುರುಬ, ಬ್ರಾಹ್ಮಣ ಹಾಗೂ ಬಿಲ್ಲವರಿಗೆ ತಲಾ ಒಂದು ಸ್ಥಾನ ನೀಡಲಾಗಿದೆ.
ಆ ಮೂಲಕ ಸತತ ಇಪ್ಪತ್ತೈದು ದಿನಗಳ ಕಾಲ ಒನ್‌ ಮ್ಯಾನ್‌ ಷೋ ನಡೆಸಿದ್ದ ಸಿಎಂ ಯಡಿಯೂರಪ್ಪ ಅವರು ವಿದ್ಯುಕ್ತವಾಗಿ ಮಿನಿಸ್ಟರ್ಸ್‌ ಬ್ರಿಗೇಡ್‌ ಅನ್ನು ಹೊಂದಿದಂತಾಗಿದೆ. ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲಿ ಹಲ ಮಂದಿ ಮಂತ್ರಿ ಪದವಿ ಆಕಾಂಕ್ಷಿಗಳು ಸ್ಥಾನ ಸಿಗದೆ ನಿರಾಶರಾಗಿದ್ದಾರಾದರೂ ದೊಡ್ಡ ಮಟ್ಟದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಲಾಗದೆ ಒಳಗೆ ಭುಸುಗುಟ್ಟುತ್ತಿರುವುದು ರಹಸ್ಯವಾಗುಳಿದಿಲ್ಲ. ಇದ್ದುದರಲ್ಲಿ ಶಾಸಕ ಅಭಯ ಪಾಟೀಲ್‌ ಮಾತ್ರ ನನ್ನ ಯೋಗ್ಯತೆ ಏನು ಅನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಂಡಂತಿಲ್ಲ. ಹೀಗಾಗಿ ನನಗೆ ಮಂತ್ರಿ ಪದವಿ ನೀಡಿಲ್ಲ ಎಂದಿದ್ದಾರಾದರೂ ಆಳದಲ್ಲಿ ಹಲ ಮಂದಿ ಪ್ರಮುಖ ನಾಯಕರು ತಮಗೆ ಸ್ಥಾನ ದೊರೆಯದ್ದಕ್ಕಾಗಿ ನಿರಾಶರಾಗಿದ್ದಾರೆ.
ಕೆಲವೇ ದಿನಗಳ ಹಿಂದೆ ತಮಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯಬೇಕು ಎಂದು ಪಟ್ಟು ಹಿಡಿದಿದ್ದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಇರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಹಾಗೆಯೇ ಯಡಿಯೂರಪ್ಪ ಅವರ ಆಪ್ತ ಮುರುಗೇಶ್‌ ನಿರಾಣಿ, ಗಣಿರೆಡ್ಡಿ ಪಡೆಯ ಪ್ರಮುಖರಾದ ಕರುಣಾಕರ ರೆಡ್ಡಿ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎ.ರಾಮದಾಸ್‌, ಕೊಡಗು ಜಿಲ್ಲೆಯ ಅಪ್ಪಚ್ಚು ರಂಜನ್‌, ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್‌, ಸಿ.ಪಿ.ಯೋಗೇಶ್ವರ್‌ ಸೇರಿದಂತೆ ಹಲ ಮಂದಿಗೆ ಸಂಪುಟ ವಿಸ್ತರಣೆಯಿಂದ ನಿರಾಸೆಯಾಗಿದೆ.
ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದಲ್ಲದೆ ಯಡಿಯೂರಪ್ಪ, ಸಂತೋಷ್‌ ಸೇರಿದಂತೆ ವಿವಿಧ ನಾಯಕರೊಂದಿಗೆ ಮಾತನಾಡಿ ಪಟ್ಟಿ ರೂಪಿಸಿತ್ತು.
ಹೀಗಾಗಿ ಮುಂಚೂಣಿಯಲ್ಲಿರುವ ವಿವಿಧ ಗುಂಪುಗಳ ನಾಯಕರ ಅಭಿಪ್ರಾಯದೊಂದಿಗೆ ರಚನೆಯಾದ ನೂತನ ಸಚಿವರ ಪಟ್ಟಿಗೆ ಯಾರೂ ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳುವ ಪರಿಸ್ಥಿತಿ ಇಲ್ಲ. ಅದೇ ರೀತಿ ಸಚಿವ ಸಂಪುಟ ವಿಸ್ತರಣೆಗಿಂತ ಮುನ್ನ, ಪಕ್ಷದ ಎಲ್ಲ ಶಾಸಕರಿಗೆ ರಹಸ್ಯ ಸಂದೇಶ ರವಾನಿಸಿದ್ದ ಬಿಜೆಪಿ ಹೈಕಮಾಂಡ್‌, ಮಂತ್ರಿ ಮಂಡಲ ರಚನೆ ಸಂಪೂರ್ಣವಾಗಿ ಹೈಕಮಾಂಡ್‌ ನಿರ್ದೇಶಿತ, ಹೀಗಾಗಿ ಸ್ಥಾನ ಸಿಗದವರು ಬಂಡಾಯ ಎದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು.
ಬಂಡಾಯ ಏಳಬಹುದಾದ ಶಾಸಕರು ಯಾರ್ಯಾರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಮೊದಲೇ ಅರ್ಥ ಮಾಡಿಕೊಂಡಿದ್ದ ಬಿಜೆಪಿ ಹೈಕಮಾಂಡ್‌ ಸಂಬಂಧಪಟ್ಟ ಬಣಗಳ ನಾಯಕರೊಂದಿಗೆ ಮಾತುಕತೆ ನಡೆಸಿತ್ತು.
ಇದು ಒಂದು ಕಡೆಗಾದರೆ ಮತ್ತೊಂದು ಕಡೆ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದಿರುವ ಬಿಜೆಪಿ ಹೈಕಮಾಂಡ್‌ ಇತಿಹಾಸದ ಅತ್ಯಂತ ಬಲಿಷ್ಟ ಹೈಕಮಾಂಡ್‌ ಆಗಿದ್ದು ಸ್ವಲ್ಪ ಹೆಚ್ಚು ಕಡಿಮೆಯಾದರೂ ತಮ್ಮ ರಾಜಕೀಯ ಭವಿಷ್ಯಕ್ಕೆ ಮಾರಕವಾಗಬಹುದು ಎಂಬ ಆತಂಕ ಬಹುತೇಕ ಎಲ್ಲರಲ್ಲೂ ಇದೆ.
ಈ ಮಧ್ಯೆ ಸರ್ಕಾರ ರಚಿಸಲು ಸಹಕಾರ ನೀಡಿ ಶಾಸಕತ್ವದಿಂದ ಅನರ್ಹಗೊಂಡಿರುವ, ಆ ಮೂಲಕ ಹುತಾತ್ಮರ ಗೆಟಪ್ಪಿನಲ್ಲಿರುವ ಹದಿನೇಳು ಮಂದಿ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ ಮುಂದಿದೆ.
ಅವರ ಪೈಕಿ ಬಹುತೇಕರು ಮಂತ್ರಿಗಿರಿಗಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೊರೆದಿದ್ದು ಸುಪ್ರೀಂಕೋರ್ಟ್‌ ತೀರ್ಪಿಗಾಗಿ ಕಾಯುತ್ತಿದ್ದಾರೆ.
ಹೀಗಾಗಿ ಅವರ ಕಣ್ಣಿಗೆ ರಾಚಬಾರದು ಎಂಬ ಕಾರಣಕ್ಕಾಗಿ ಈ ಮುನ್ನ ಯೋಚಿಸಿದಂತೆ ಇಪ್ಪತ್ತು ಮಂದಿಯನ್ನು ಮಂತ್ರಿ ಮಾಡದೆ ಇರಲು ನೆನ್ನೆ ಹೈಕಮಾಂಡ್‌ ನಿರ್ಧರಿಸಿತ್ತು. ಇಪ್ಪತ್ತು ಮಂದಿಗೆ ಅವಕಾಶ ನೀಡಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿ ಸಚಿವ ಸಂಪುಟದಲ್ಲಿ ಇಪ್ಪತ್ತೊಂದು ಮಂದಿ ಇದ್ದಂತಾಗುತ್ತದೆ.ಆ ಮೂಲಕ ಬಾಕಿ ಉಳಿದಿರುವುದು ಹದಿಮೂರು ಸ್ಥಾನಗಳು ಮಾತ್ರ ಎಂದು ಪ್ರಚುರಪಡಿಸಿದಂತಾಗುತ್ತದೆ. ಇದರಿಂದ ಹುತಾತ್ಮರ ಗೆಟಪ್ಪಿನಲ್ಲಿರುವವರಿಗೂ ಆತಂಕವಾಗಬಹುದು.ಹಾಗೆಯೇ ಇನ್ನು ತಮಗೆ ಅವಕಾಶವೇ ಇಲ್ಲವೆಂದು ಪಕ್ಷದಲ್ಲಿರುವ ಹಲವರು ಬಾವಿಸಬಹುದು.ಹೀಗಾಗಿ ಮಂತ್ರಿ ಮಂಡಲಕ್ಕೆ ಹದಿನೇಳು ಮಂದಿ ಸಾಕು ಎಂಬ ತೀರ್ಮಾನಕ್ಕೆ ವರಿಷ್ಟರು ಬಂದಿದ್ದರು.
ಅದರ ಪರಿಣಾಮವಾಗಿ ಇಂದು ನಡೆದ ಸಚಿವ ಸಂಪುಟ ವಿಸ್ತರಣೆ ಕಾರ್ಯ ಹಲವರಿಗೆ ಸಮಾಧಾನದ ಸಂದೇಶವನ್ನೂ ರವಾನಿಸಿದ್ದು,ಅದೇ ಕಾಲಕ್ಕೆ ಯಡಿಯೂರಪ್ಪ ಅವರ ಸರ್ಕಾರ ನೂತನ ಸಚಿವರಿಂದ ಕಳೆ ಪಡೆದಂತಾಗಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa R Ashok cabinet Eshwarappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ