ಯಾರ್ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

BSY Cabinet

19-08-2019

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರದ ಮಂತ್ರಿ ಮಂಡಲ ಮಂಗಳವಾರ ವಿಸ್ತರಣೆಯಾಗಲಿದ್ದು ಹಿರಿಯ ನಾಯಕ ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಹಲ ಪ್ರಮುಖರು ನೂತನ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ 10:30 ಕ್ಕೆ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಸುಮಾರು ಹದಿನೆಂಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ರಾಜ್ಯಪಾಲ ವಜೂಭಾಯಿ ವಾಲಾ ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಲಿದ್ದಾರೆ.

ಆದರೆ ಮಂತ್ರಿಗಳಾಗುವವರು ಯಾರು ಎಂಬ ಕುರಿತು ಬಿಜೆಪಿ ಹೈಕಮಾಂಡ್ ಸೋಮವಾರ ಸಂಜೆ ಲಕೋಟೆಯಲ್ಲಿರಹಸ್ಯ ಪಟ್ಟಿ ರವಾನಿಸಿದ್ದು ಅದೇ ಕಾಲಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿರುವಂತೆ ಪಕ್ಷದ ನೂರಾ ಐದು ಶಾಸಕರಿಗೂ ಸಿಗ್ನಲ್ ರವಾನಿಸಿದೆ.

ಉನ್ನತ ಮೂಲಗಳ ಪ್ರಕಾರ ಸಚಿವ ಸಂಪುಟಕ್ಕೆಯಾರು ಸೇರ್ಪಡೆಯಾಗಬೇಕು?ಎಂಬ ಕುರಿತು ಹೈಕಮಾಂಡ್‍ಎಲ್ಲರೊಂದಿಗೆ ಚರ್ಚಿಸಿ ಅಂತಿಮವಾಗಿ ತನ್ನದೇ ಒಂದು ಪಟ್ಟಿ ತಯಾರಿಸಿದೆ.

ಅದರ ಪ್ರಕಾರ ಪಕ್ಷಕ್ಕಾಗಿ, ಸಂಘಟನೆಗಾಗಿ ದುಡಿದವರಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು ಇದುವರೆಗೂ ಪ್ರಭಾವ ಬೀರಿ ಮಂತ್ರಿಗಳಾಗುತ್ತಿದ್ದವರ ಪೈಕಿ ಅನೇಕರಿಗೆ ಪಟ್ಟಿಯಲ್ಲಿ ಜಾಗ ಸಿಕ್ಕಿಲ್ಲ. ಹಿರಿತನ, ಪ್ರಾದೇಶಿಕ ಸಮತೋಲನದಂತಹ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಿಜೆಪಿ ಹೈಕಮಾಂಡ್, ಯಾರು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು? ಎಂಬುದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಪಟ್ಟಿ ರಚಿಸಿದ್ದಾರೆ.

ಮಂತ್ರಿ ಮಂಡಲಕ್ಕೆಯಾರು ಸೇರಬೇಕು ಎಂಬುದು ಮತ್ತು ಯಾರಿಗೆ ಯಾವ ಖಾತೆ ನೀಡಬೇಕು?ಎಂಬುದನ್ನು ಹೈಕಮಾಂಡ್ ನಿರ್ಧರಿಸಿದೆ. ಮತ್ತು ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಎಲ್ಲರೂಅದನ್ನು ಗೌರವಿಸಿ ಮುನ್ನಡೆಯಬೇಕುಎಂದು ವರಿಷ್ಟರು ಕಟ್ಟಪ್ಪಣೆ ಮಾಡಿದ್ದಾರೆ.

ಮಂತ್ರಿಮಂಡಲ ವಿಸ್ತರಣೆಯಲ್ಲಿತಮಗೆ ಅವಕಾಶ ಸಿಕ್ಕಿಲ್ಲ ಎಂದುಯಾರಾದರೂ ಬಂಡಾಯವೇಳುವುದು ಅಥವಾ ಅದಕ್ಕೆ ಕುಮ್ಮಕ್ಕು ನೀಡುವ ಕೆಲಸ ಮಾಡಿದರೆ ಕಷ್ಟಕ್ಕೆ ಸಿಲುಕುವುದು ನಿಶ್ಚಿತ ಎಂದುಎಚ್ಚರಿಕೆ ನೀಡಲಾಗಿದೆ.

ಸಂಪುಟ ವಿಸ್ತರಣೆಯಲ್ಲಿ ಅವಕಾಶ ಪಡೆದವರು ಹೈಕಮಾಂಡ್‍ ಇಚ್ಛೆಯ ಅನುಸಾರ ಮಂತ್ರಿಗಳಾಗುತ್ತಿರುವವರು. ಇದನ್ನು ಕೂಡಾ ಎಲ್ಲ ಪ್ರಮುಖರೊಂದಿಗೆ ಚರ್ಚಿಸಿ ಅವಕಾಶ ನೀಡಲಾಗಿದೆ.

ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವವರು ಯಾವ ರೀತಿ ಕೆಲಸ ಮಾಡುತ್ತಾರೆ? ಎಂಬುದನ್ನು ಗಮನಿಸಲು ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಗುತ್ತದೆ ಮತ್ತುರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಕ್ಯಾಬಿನೆಟ್‍ ದರ್ಜೆಯ ಸ್ಥಾನಮಾನದೊಂದಿಗೆ ಈ ಸಮಿತಿಯ ಅಧ್ಯಕ್ಷರಾಗಲಿದ್ದಾರೆ.

ಸರ್ಕಾರ ಮತ್ತು ಪಕ್ಷ ಇವತ್ತು ಕಠಿಣ ಸನ್ನಿವೇಶದಲ್ಲಿದೆ. ಹೀಗಾಗಿ ಅದನ್ನುಎಚ್ಚರಿಕೆಯಿಂದ ಮುನ್ನಡೆಸಿ ಜನರಿಗೆ ಸಮಾಧಾನವಾಗುವಂತೆ ನೋಡಿಕೊಳ್ಳಬೇಕಿದೆ. ಈ ಅಂಶವೇ ಸಂಪುಟ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ಮೂಲಗಳ ಮಾತು.

ಹೀಗೆ ಸಂಪುಟ ವಿಸ್ತರಣೆಯ ಕುರಿತಂತೆ ಬಿಜೆಪಿ ಹೈಕಮಾಂಡ್ ವಹಿಸಿರುವ ಪಾತ್ರ ಸ್ಥಳೀಯ ನಾಯಕರನ್ನು ಬೆಚ್ಚಿ ಬೀಳಿಸಿದ್ದು ಮೊನ್ನೆ ಮೊನ್ನೆಯವರೆಗೆ ತಾವು ಮಂತ್ರಿಗಳಾಗುವುದು ಶತಸಿದ್ಧ ಎಂಬ ನಂಬಿಕೆಯಲ್ಲಿದ್ದವರಿಗೆಎದೆ ಬಡಿತಜೋರಾಗಿದೆ.

ಮುಖ್ಯಮಂತ್ರಿಯಡಿಯೂರಪ್ಪ,ಸಂಘಪರಿವಾರದ ನಾಯಕರು ಸೇರಿದಂತೆಎಲ್ಲರೊಂದಿಗೆಚರ್ಚೆ ನಡೆಸಿ ಬಿಜೆಪಿ ಹೈಕಮಾಂಡ್ ಪಟ್ಟಿ ರಚಿಸಿದ್ದು ಇದರ ಪರಿಣಾಮವಾಗಿಯಡಿಯೂರಪ್ಪ ಬಯಸಿದ ಕೆಲವರಿಗಷ್ಟೇ ಮಂತ್ರಿಗಳಾಗುವ ಅವಕಾಶ ಸಿಕ್ಕಿದೆ.

ಹಾಗೆಯೇ ಸಂಘಪರಿವಾರ ಸೂಚಿಸಿದ ಕೆಲವರಿಗೆ ಮಂತ್ರಿಗಿರಿ ಸಿಕ್ಕಿದ್ದು ಉಳಿದಂತೆ ತನಗಿರುವ ಮೂಲದಿಂದ ವರದಿ ತರಿಸಿಕೊಂಡ ಹೈಕಮಾಂಡ್‍ ತನಗೆ ತೃಪ್ತಿಕರವಾದ ಕೆಲ ಹೆಸರುಗಳನ್ನು ಪಟ್ಟಿಗೆ ಸೇರಿಸಿದೆ. ಹೀಗಾಗಿ ಮಂತ್ರಿ ಮಂಡಲದ ಪಟ್ಟಿಯ ಸ್ವರೂಪದ ಬಗ್ಗೆ ಇದುವರೆಗೆ ಗಾಳಿ ಸುದ್ದಿ ಹರಡುತ್ತಿದೆಯೇ ಹೊರತು ಕೆಲ ಹೆಸರುಗಳನ್ನು ಹೊರತುಪಡಿಸಿದರೆ ಸಂಪುಟ ಹೀಗೆಯೇ ಇರುತ್ತದೆ ಎಂದು ಹೇಳುವುದು ಕಷ್ಟದ ಕೆಲಸವಾಗಿದೆ.

ಮೂಲಗಳ ಪ್ರಕಾರ, ಹೊಸಬರಿಗೂ ಸಚಿವ ಸಂಪುಟದಲ್ಲಿ ಆದ್ಯತೆ ಸಿಕ್ಕಿದ್ದು ಈ ಅಂಶವೂ ತಾವೇ ದೊಡ್ಡ ನಾಯಕರು ಎಂಬ ಭ್ರಮೆಯಲ್ಲಿದ್ದ ಹಲವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹಾಗೆಯೇ ಮಂತ್ರಿ ಮಂಡಲ ರಚನೆಗೂ ಮುನ್ನ ಪ್ರಮುಖ ನಾಯಕರ ಅಕ್ಕ ಪಕ್ಕ ಇದ್ದು ನಿಮಗೆ ಮಂತ್ರಿಗಿರಿ ಕೊಡಿಸುತ್ತೇವೆ ಎನ್ನುತ್ತಿದ್ದವರು ಸೌಂಡು ಮಾಡದ ಪರಿಸ್ಥಿತಿ ಸೃಷ್ಟಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa BJP cabinet Amith Shah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ