ಈ ಬಾರಿ ಪರಿಸರ ಸ್ನೇಹಿ ಗಣಪ ಕಡ್ಡಾಯ!

Eco friendly Ganesha

17-08-2019

ಬೆಂಗಳೂರು: ರಾಜ್ಯದಲ್ಲಿ ಪಿಒಪಿ ಮಾದರಿಯ ಗಣೇಶ ಮೂರ್ತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಪರಿಸರ ಸ್ನೇಹಿ ಗಣೇಶ ಕೂರಿಸಲು ಮಾತ್ರ ಪರವಾನಗಿ ನೀಡುವಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಹಾಗೂ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಪಿಒಪಿ ಗಣೇಶ ಕೂರಿಸದಂತೆ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ಪರಿಸರ ಸ್ನೇಹಿ ಗಣೇಶ ಎಂಬುದು ಖಾತ್ರಿಯಾದ ನಂತರವಷ್ಟೇ ಗಣೇಶನನ್ನು ಪ್ರತಿಷ್ಠಾಪಿಸಲು ಪರವಾನಗಿ ನೀಡುವಂತೆ ಬೆಸ್ಕಾಂ, ಬಿಬಿಎಂಪಿ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳಕ್ಕೆ ನೀಡುವಂತೆ ಸೂಚನೆ ನೀಡಲಾಗಿದೆ .ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಸಿಇಓ, ನಗರ ಸಭೆ, ಮಹಾನಗರ ಪಾಲಿಕೆ ಆಯುಕ್ತರಿಗೆ ಕೂಡ ಈ ಕುರಿತು ಪತ್ರ ಬರೆದಿದ್ದು, ಪಿಒಪಿ ಗಣೇಶ ಮಾರುವ ಹಾಗೂ ಕೂರಿಸುವವರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಗೆ 32 ಕಲ್ಯಾಣಿಗಳು ಹಾಗೂ 100 ಮೊಬೈಲ್ ವ್ಯಾನ್‍ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿದ್ದರೆ ಮೊಬೈಲ್ ವ್ಯಾನ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಗಣೇಶ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ 10 ವಿಶೇಷ ವಾಹನಗಳನ್ನು ನಿಯೋಜಿಸಲಾಗಿದೆ. ಈ ವಿಶೇಷ ವಾಹನಗಳಲ್ಲಿ ಜನರಿಗೆ ಗಣೇಶ ಹಬ್ಬದ ಆಚರಣೆ, ಪ್ರಾಮುಖ್ಯತೆ, ಇತಿಹಾಸ, ಹಬ್ಬಗಳ ಸಂಸ್ಕತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದರಲ್ಲಿ ಗಣೇಶ ಹಬ್ಬದ ಸ್ತಬ್ಧ ಚಿತ್ರಗಳಿರಲಿದ್ದು, ನೃತ್ಯ ಪ್ರದರ್ಶನ ಸಹ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಮಹಾರಾಷ್ಟ್ರ, ಆಂಧ್ರ ಪ್ರದೇಶ ಗಡಿ ಭಾಗದಿಂದ ಪಿಒಪಿ ಗಣೇಶ ಆಮದಾಗುವ ಸಾಧ್ಯತೆ ಇರುವುದರಿಂದ ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆ ನಡೆಸುವಂತೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಪತ್ರ ಬರೆದು ಸೂಚನೆ ನೀಡಲಾಗಿದೆ. ಪಿಒಪಿ ಗಣೇಶ ಮೂರ್ತಿ ಮಾರಾಟ ಸ್ಥಳದ ಮೇಲೆ ದಾಳಿ ನಡೆಸಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪಿಒಪಿ ಗಣೇಶವನ್ನು ಕೂರಿಸುವುದರಿಂದ ಉಂಟಾಗುವ ಪರಿಸರಹಾನಿ, ನದಿಗಳು ಕಲುಷಿತವಾಗುವ ಬಗ್ಗೆ ಮಾಧ್ಯಮದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಪ್ರತಿಯೊಬ್ಬರು ಈ ಬಾರಿಯ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Ganesha Festival Rule Eco Friendly Maharashtra


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ