ನೆರೆ ಪರಿಹಾರದಲ್ಲಿ ಕೈ ಜೋಡಿಸಲು ಸಿಎಂ ಮನವಿ

CM Yediyurappa Statement

13-08-2019

ಬೆಂಗಳೂರು: ರಾಜ್ಯದಲ್ಲಿ ವ್ಯಾಪಕ ಮಳೆ, ಭೀಕರ ಪ್ರವಾಹದಿಂದ ಆಗಿರುವ ಹಾನಿ ಹಿನ್ನೆಲೆಯಲ್ಲಿ ಪರಿಹಾರ ಕೈಗೊಳ್ಳಲು ಉದ್ಯಮಿಗಳು, ಜನಪ್ರತಿನಿಧಿಗಳು, ಚಿತ್ರೋದ್ಯಮದ ಗಣ್ಯರು, ಸಾರ್ವಜನಿಕರು ಉದಾರವಾಗಿ ನೆರವು ನೀಡದಿದ್ದರೆ ಕರ್ನಾಟಕದ ಪುನರ್ ನಿರ್ಮಾಣ ಕಷ್ಟಸಾಧ್ಯವಾಗಲಿದೆ.
ಊಹೆಗೆ ನಿಲುಕದಷ್ಟು ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಇದಕ್ಕೆ ಸೂಕ್ತ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲು ಸಾರ್ವಜನಿಕರ ನೆರವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರದಿಂದ ಸಂಪನ್ಮೂಲ ಸಂಗ್ರಹಣೆಗೆ ಒತ್ತು ನೀಡಲಿದ್ದಾರೆ.
ಬುಧವಾರ ಯಡಿಯೂರಪ್ಪ ನಾಡಿನ ಪ್ರಮುಖ ಉದ್ಯಮಿಗಳ ಸಭೆ ಕರೆದಿದ್ದು, ಭಾರೀ ಪ್ರಮಾಣದಲ್ಲಿ ಸಂಭವಿಸಿರುವ ನೈಸರ್ಗಿಕ ವಿಪತ್ತಿಗೆ ಸೂಕ್ತ ಪರಿಹಾರ ಒದಗಿಸುವಂತೆ ಕೋರಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿ ಹಾಗೂ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ್ ಈ ಕುರಿತು ಮಾತನಾಡಿ, ಪರಿಹಾರ ಮತ್ತು ಪುನರ್ ವಸತಿ ಕಾರ್ಯಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಸರಣಿ ಸಭೆಗಳನ್ನು ನಡೆಸಿ, ಎಲ್ಲಾ ವಲಯದಿಂದ ನೆರವು ಯಾಚಿಸಲಿದ್ದಾರೆ ಎಂದರು.

ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದಲ್ಲಿ ನೆರವು ನೀಡುವ ಭರವಸೆ ಕೊಟ್ಟಿದ್ದು, ರಾಜ್ಯದ ಸಂಪನ್ಮೂಲದಿಂದಲೂ ಪರಿಹಾರ ಕಾರ್ಯಕ್ಕೆ ಹಣ ಒದಗಿಸಲಾಗುವುದು. ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಹೇಗೆ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಬಹುದು ಎನ್ನುವ ಬಗ್ಗೆಯೂ ಮುಖ್ಯಮಂತ್ರಿ ಅವರು ಚರ್ಚಿಸಲಿದ್ದಾರೆ ಎಂದು ಹೇಳಿದರು.
ಇನ್ ಫೋಸಿಸ್ ಪ್ರತಿಷ್ಠಾನ ಈಗಾಗಲೇ ಹತ್ತು ಕೋಟಿ ರೂ ನೀಡುವುದಾಗಿ ಹೇಳಿದ್ದು, ಸರ್ಕಾರಿ ನೌಕರರ ಸಂಘ ಒಂದು ದಿನದ ವೇತನವನ್ನು ನೆರೆ ಸಂತ್ರಸ್ತರಿಗೆ ಕೊಡುವುದಾಗಿ ಭರವಸೆ ನೀಡಿದೆ. ಸಾರ್ವಜನಿಕ ಸಂಘ ಸಂಸ್ಥೆಗಳು, ವೈಕ್ತಿಯವಾಗಿ ಸಾರ್ವಜನಿಕರು ದೇಣಿಗೆ ನೀಡಲು ಮುಂದಾಗಬೇಕು. ಅದರಲ್ಲೂ ಪ್ರಮುಖವಾಗಿ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಇಲ್ಲಿನ ನೋವಿಗೆ ಮಿಡಿಯಬೇಕು ಎಂದರು.
ಪ್ರಮುಖವಾಗಿ ಚಿತ್ರೋದ್ಯಮ ನಾಡಿನ ನೋವಿಗೆ ಸ್ಪಂದಿಸುವ ವಿಶ್ವಾಸವಿದ್ದು, ಇದಕ್ಕಾಗಿ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಚಿತ್ರರಂಗದ ಗಣ್ಯರು ಸಂಪನ್ಮೂಲ ಸಂಗ್ರಹಿಸಲು ಸರ್ಕಾರದೊಂದಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ತೀವ್ರ ಸಂಕಷ್ಟದಲ್ಲಿದ್ದು, ಕೆಲವು ದುಷ್ಟ ಶಕ್ತಿಗಳು ಸಾರ್ವಜನಿಕರಿಂದ ದೇಣಿಗೆ ವಸೂಲಿ ಮಾಡಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ಸಹ ಇರುತ್ತವೆ. ಅಂತಹ ಅನುಮಾನ ಬಂದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಬೇಕು ಎಂದು ಸಹ ಶಿವಯೋಗಿ ಕಳಸದ್ ಮನವಿ ಮಾಡಿದ್ದಾರೆ.
ನೆರೆ ಪರಿಹಾರದ ಹಿನ್ನೆಲೆಯಲ್ಲಿ ದೇಣಿಗೆ ನೀಡುವವರು, ಈ ಖಾತೆಗೆ ಚೆಕ್, ಡಿಡಿ, ನೇರ ನಗದು ವರ್ಗಾವಣೆ ಮೂಲಕ ನೆರವಾಗಬಹುದು.

ಖಾತೆಯ ಹೆಸರು : chief minister relief fund natural calamity
ಬ್ಯಾಂಕ್ ಹೆಸರು : sbi bank, vidhana soudha
ಬ್ಯಾಂಕ್ ಖಾತೆ ಸಂಖ್ಯೆ ; 37887098605
ಐ.ಎಫ್.ಎಸ್.ಸಿ. ಕೋಡ್ ; sbin004027
ಎಂಐಸಿಆರ್ ಕೋಡ್ ; 560002419

 


ಸಂಬಂಧಿತ ಟ್ಯಾಗ್ಗಳು

Flood Heavy rain BS Yediyurappa Infosys


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ