ಕುಖ್ಯಾತ ರೌಡಿ ಬಾಬಿ ಬಂಧಿಯಾಗಿದ್ದು ಹೇಗೆ?

Rowdy Bobby arrested

13-08-2019

ಬೆಂಗಳೂರು, ಆ. 13- ಬಂಧಿಸಲು ಬೆನ್ನಟ್ಟಿ ಬಂದ ಪೊಲೀಸರ ಮೇಲೆ ಡ್ಯಾಗರ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ  ಕುಖ್ಯಾತ ರೌಡಿ ಭರತ್ ಅಲಿಯಾಸ್ ಬಾಬಿಯ ಕಾಲಿಗೆ ಗುಂಡು ಹೊಡೆದು ಉತ್ತರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಹೊಡೆದ ಗುಂಡು ಬಲಗಾಲಿಗೆ ತಗುಲಿ ಗಾಯಗೊಂಡಿರುವ ಮಹಾಲಕ್ಷ್ಮಿ ಲೇಔಟ್‍ನ ರೌಡಿ ಭರತ್ (25) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ರೌಡಿ ಭರತ್ ನಡೆಸಿದ ಹಲ್ಲೆಯಿಂದ ಪೇದೆ ಉಮೇಶ್ ಗಾಯಗೊಂಡಿದ್ದಾರೆ.

ತಂದೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಎದುರಾಳಿ ರೌಡಿ ನಂದಿನಿ ಲೇಔಟ್ ವೆಂಕಟೇಶ್ ಅಲಿಯಾಸ್ ಕಾಡುನನ್ನು ನಂದಿನಿ ಲೇಔಟ್‍ನ ಗಣೇಶ ಬ್ಲಾಕ್ ಬಳಿ ಕಳೆದ ಆಗಸ್ಟ್ 8 ರಂದು ಮಧ್ಯಾಹ್ನ 2.45ರ ಹಾಡುಹಗಲೇ ನಾಲ್ವರು ಸಹಚರರ ಜೊತೆ ಅಡ್ಡಗಟ್ಟಿ ಚಾಕುವಿನಿಂದ ಕೈಗೆ ಚುಚ್ಚಿ ಕೊಲೆಯತ್ನ ನಡೆಸಿ, ರೌಡಿ ಭರತ್ ಪರಾರಿಯಾಗಿ ತಲೆಮರೆಸಿಕೊಂಡಿದ್ದನು.

ಈ ಸಂಬಂಧ ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೌಡಿ ಭರತ್ ಬಂಧನಕ್ಕಾಗಿ ನಂದಿನಿ ಲೇಔಟ್ ಇನ್ಸ್‍ಪೆಕ್ಟರ್ ಲೋಹಿತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದು ಡಿಸಿಪಿ ಶಶಿಕುಮಾರ್ ಅವರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿದ್ದ ರೌಡಿ ಭರತ್ ನಿನ್ನೆರಾತ್ರಿ 12.40ರ ವೇಳೆ ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದ ಮಂಜುನಾಥ್ ಎಂಬುವವರನ್ನು ಅಡ್ಡಗಟ್ಟಿ ಬೆದರಿಸಿ, ನಗದು, ಮೊಬೈಲ್ ಅಲ್ಲದೆ, ಬೈಕ್ ಅನ್ನು ದೋಚಿ ಪರಾರಿಯಾಗಿದ್ದ. ಈ ಸಂಬಂಧ ನಿಯಂತ್ರಣ ಕೊಠಡಿಗೆ ಮಂಜುನಾಥ್ ಮಾಹಿತಿ ನೀಡಿದ್ದರು.

ಕಳವುಗೊಂಡ ಬೈಕ್ ಬಾಡಿಗೆ ಪಡೆಯುವ ಡ್ರೈವ್‍ಜೀ ಕಂಪನಿಗೆ ಸೇರಿದ್ದಾಗಿದ್ದು, ಅದಕ್ಕೆ ಜಿಪಿಎಸ್ ಅಳವಡಿಸಿರುವ ವಿಷಯವನ್ನೂ ಕೂಡ ಮಂಜುನಾಥ್, ಪೊಲೀಸರಿಗೆ ತಿಳಿಸಿದ್ದ. 

ಜಿಪಿಎಸ್ ಆಧರಿಸಿ ರೌಡಿ ಭರತ್‍ನನ್ನು ಬೆನ್ನಟ್ಟಿದ ನಂದಿನಿ ಲೇಔಟ್ ಪೊಲೀಸ್ ಇನ್ಸ್‍ಪೆಕ್ಟರ್ ಲೋಹಿತ್, ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಣ್ ಅವರಿದ್ದ ಸಿಬ್ಬಂದಿ, ಗೊರಗುಂಟೆ ಪಾಳ್ಯದ ಬಳಿ ಕಳವು ಮಾಡಿದ ಬೈಕ್ ಇರುವುದನ್ನು ಪತ್ತೆಹಚ್ಚಿ ಕಾರ್ಯಾಚರಣೆ ಕೈಗೊಂಡರು.

ಪೊಲೀಸರು ಬೆನ್ನಟ್ಟಿ ಬಂದಿದ್ದನ್ನು ಕಂಡ ರೌಡಿ ಭರತ್, ಜಾಲಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್‍ಮೆಂಟ್‍ನ ಬಳಿ ಬೈಕ್ ನಿಲ್ಲಿಸಿ ಹೆಚ್‍ಎಂಟಿ ಕಾರ್ಖಾನೆ ಒಳಗೆ ಓಡಿ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಪೇದೆ ಉಮೇಶ್ ಹಿಡಿಯಲು ಹೋಗಿದ್ದು, ಅವರಿಗೆ ಭರತ್ ಡ್ಯಾಗರ್‍ನಿಂದ ಚುಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಕೂಡಲೇ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಣ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ಸೂಚನೆ ನೀಡಿದರೂ, ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅದು ಬಲಗಾಲಿಗೆ ತಗುಲಿ ಸ್ಥಳದಲ್ಲೇ ಭರತ್ ಕುಸಿದುಬಿದ್ದಿದ್ದಾನೆ.

ಭರತ್‍ನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಉಮೇಶ್ ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ರೌಡಿ ಭರತ್, ನಂದಿನಿ ಲೇಔಟ್‍ನಲ್ಲಿ 2 ಕೊಲೆಯತ್ನ, ಒಂದು ಕಳವು, ಬ್ಯಾಟರಾಯನಪುರ ಹಾಗೂ ನೆಲಮಂಗಲದಲ್ಲಿ ತಲಾ ಒಂದು ಸುಲಿಗೆ, ಮಹಾಲಕ್ಷ್ಮಿ ಲೇಔಟ್‍ನಲ್ಲಿ ಎರಡು ಕೊಲೆಯತ್ನ ಸೇರಿ, 9ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಅಪರಾಧ ಕೃತ್ಯಗಳಲ್ಲಿ ಜೈಲಿಗೆ ಹೋಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದ ಆತ,  ಚಾಕು, ಡ್ಯಾಗರ್ ಹಿಡಿದು ಓಡಾಡುತ್ತ ಎದುರಾಳಿಗಳನ್ನು ಬೆದರಿಸಿ, ಸುಲಿಗೆ ಮಾಡುತ್ತ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Rowdy Shootout Police case CCB


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ