ಮಾಣಿಕ್ ಷಾ ಮೈದಾನದಲ್ಲಿ ಭದ್ರತೆ ಹೇಗಿದೆ?

Independence day security

13-08-2019

ಬೆಂಗಳೂರು: ನಗರದ ಮಹಾತ್ಮಗಾಂಧಿ ರಸ್ತೆಯ ಫೀಲ್ಡ್‍ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆ. 15 ರಂದು ನಡೆಯಲಿರುವ ಸ್ವಾತಂತ್ರ್ಯದಿನಾಚರಣೆ ಸಮಾರಂಭಕ್ಕೆ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ದಿನಾಚರಣೆ ವೀಕ್ಷಣೆಗೆ ಆಗಮಿಸುವ ಪ್ರತಿಯೊಬ್ಬರನ್ನು ಲೋಹ ಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಿ ಮೈದಾನದ ಒಳಗೆ ಹಾಗೂ ಸುತ್ತ-ಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಫೀಲ್ಡ್‍ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ  ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ವ್ಯವಸ್ಥಿತ ಹಾಗೂ ಅಕರ್ಷಕವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಸ್ವಾತಂತ್ರ್ಯ ದಿನಾಚರಣೆಯಂದು  ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ. ಇದಕ್ಕೂ ಮುನ್ನ ನಡೆಯುವ ಪಥ ಸಂಚಲನದಲ್ಲಿ ಕೆಎಸ್‍ಆರ್‍ಪಿ, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡ ಕವಾಯತು ಬ್ಯಾಂಡ್‍ನ 34 ತುಕಡಿಗಳಲ್ಲಿ 1130 ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಒಟ್ಟು 2 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 1250 ಶಾಲಾ ಮಕ್ಕಳು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ ಎಂದರು.

ಭಾರಿಯ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೈದಾನದಲ್ಲಿ ಭದ್ರತಾ ಸುರಕ್ಷತೆಗಾಗಿ 50 ಸಿಸಿ ಕ್ಯಾಮರಾ, 4 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣಾ ವ್ಯವಸ್ಥೆ ಮಾಡಲಾಗಿದೆ.

ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ಬೇಕಾದ ಆಂಬುಲೆನ್ಸ್‍ಗಳು, ವೈದ್ಯಕೀಯೇತರ ಸಿಬ್ಬಂದಿಗಳು ಮತ್ತು ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿ ಶಾಮಕವಾಹನಗಳು ಮತ್ತು ಅಗತ್ಯ ಸಿಬ್ಬಂದಿ  ನಿಯೋಜಿಸಲಾಗಿದೆ.

`ಕಲರಿ ಪೈಟು' ವಿಶೇಷ

ಸಾಂಸ್ಕೃತಿಕ ಕಾರ್ಯಕ್ರಮ ಮೊದಲಿಗೆ ಮೃತ್ಯುಂಜಯ ದೊಡ್ಡವಾಡ ತಂಡದವರಿಂದ ನಾಡಗೀತೆ ಮತ್ತು ರೈತಗೀತೆ, ಉತ್ತರ ಹಳ್ಳಿಯ ಸರಕಾರಿ ಶಾಲೆಯ 650 ಮಕ್ಕಳಿಂದ `ಭಾರತಾಂಭೆಯ ಮಡಿಲಿನ ಮಕ್ಕಳು'

ಹೇರೋಹಳ್ಳಿ ಬಿಬಿಎಂಪಿ ಪ್ರೌಢಶಾಲೆಯ 600 ಮಕ್ಕಳಿಂದ `ಜಲಿಯನ್ ವಾಲಾಭಾಗ್ ಹತ್ಯಾಕಾಂಡ-1919' ಮದ್ರಾಸ್ ಇಂಜಿನಿಯರ್ ಗ್ರೂಪ್ 26 ಸದಸ್ಯರಿಂದ `ಜಿಮ್ನಾಸ್ಟಿಕ್', ತಮಿಳುನಾಡಿನ ಮದ್ರಾಸ್ ರೆಜಿಮೆಂಟಲ್ ಸೆಂಟರ್‍ನ 29 ಸದಸ್ಯರಿಂದ `ಕಲರಿ ಪೈಟು' (ಮಾರ್ಷಿಯಲ್ ಆರ್ಟ್) ಸಾಹಸ ಕಾರ್ಯಕ್ರಮಗಳು ನಡೆಯಲಿವೆ.


ಸಂಬಂಧಿತ ಟ್ಯಾಗ್ಗಳು

Independence day BS Yediyurappa Manishaw ground Security


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ