ಕೆಎಸ್ ಆರ್ ಟಿ ಸಿ ಬಸ್ ಬ್ರೇಕ್ ಫೇಲ್: ಮುಂದೇನಾಯ್ತು?

KSRTC Bus Accident

12-08-2019

ಬೆಂಗಳೂರು: ವೇಗವಾಗಿ ಬಂದ ಬ್ರೇಕ್ ವೈಫಲ್ಯದಿಂದ ಕೆಎಸ್‍ಆರ್‍ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿ 10 ಮಂದಿ ಗಾಯಗೊಂಡಿರುವ ದುರ್ಘಟನೆ ಮಲ್ಲೇಶ್ವರಂ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ರಾಜಾಜಿನಗರದ ನವರಂಗ್ ಚಿತ್ರಮಂದಿರ ಬಳಿಯ ರಾಜಕುಮಾರ ರಸ್ತೆಯಲ್ಲಿ ನಡೆದ ಈ ಅಪಘಾತದಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಲ್ಲಿ ಬಸ್‍ನ ಚಾಲಕ ಹಾಗೂ ನಿರ್ವಹಕ ಕೂಡ ಸೇರಿದ್ದಾರೆ.

ಹಾಸನದಿಂದ ಬೆಂಗಳೂರು ಕಡೆಗೆ ಬೆಳಿಗ್ಗೆ 9.30ರ ವೇಳೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ರಾಜಕುಮಾರ ರಸ್ತೆಯ 10ನೇ ಕ್ರಾಸ್‍ನ ಸಿಗ್ನಲ್ ಬಳಿ ಬ್ರೇಕ್ ವೈಫಲ್ಯದಿಂದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 10 ಮಂದಿ ಗಾಯಗೊಂಡಿದ್ದು ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಮಲ್ಲೇಶ್ವರಂ ಸಂಚಾರ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅನಿಲ್ ಅವರು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಅಪಘಾತಗೊಂಡ ಬಸ್ ಅನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಡಿಸಿಪಿ ಡಾ.ಸೌಮ್ಯಲತಾ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Malleshwaram KSRTC Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ