ಸಂತ್ರಸ್ತರಿಗೆ ಸರ್ಕಾರದ ಅಭಯ

Karnataka Floods

08-08-2019

ಬೆಂಗಳೂರು: ಮಹಾಮಳೆಯಿಂದ ಮನೆ ಮಠ ಕಳೆದುಕೊಂಡು ತತ್ತರಿಸಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರವೇ ಮನೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ಸೇರಿದಂತೆ ಹಲವೆಡೆ ಮಳೆ ಹಾನಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ‌ ನಿರ್ವಹಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ‌ ಹೊಸ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಆಸ್ತಿ ‌ನಷ್ಟವಾದವರಿಗೂ ಪರಿಹಾರ‌ ನೀಡಲಾಗುವುದು. ಪ್ರವಾಹದಲ್ಲಿ ಮೃತರಾದವರಿಗೆ ಐದು ಲಕ್ಷ ರೂ ಪರಿಹಾರ ನೀಡಲಾಗುವುದು. ಪ್ರವಾಹ ಪರಿಸ್ಥಿತಿ ‌ನಿಭಾಯಿಸಲು ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಕೋಟಾ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ, ಸಿ.ಎಂ.ಉದಾಸಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ‌ನಡೆಸಲು ಸೂಚಿಸಲಾಗಿದೆ. ಇನ್ನೂ ಮೂರು ದಿನ ಉತ್ತರ ಕನ್ನಡದಲ್ಲೇ ವಾಸ್ತವ್ಯ ಮಾಡಲಿದ್ದು‌ ಪ್ರವಾಹ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ನಾನು ಇನ್ನು ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದೇನೆ. ಎಲ್ಲೆಲ್ಲಿ ಮಳೆಯಿಂದ ಹಾನಿ ಉಂಟಾಗಿದೆಯೋ ಅಂತಹ ಕಡೆ ಭೇಟಿ ನೀಡುತ್ತೇನೆ. ನನ್ನ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸಂತ್ರಸ್ತರ ನೆರವಿಗೆ ನಿಲ್ಲುತ್ತೇನೆ ಎಂದರು.

ಸಚಿವರು ಇಲ್ಲ ಎಂಬ ಮನೋಭಾವನೆ ಬೇಡ. ಖುದ್ದು ಮುಖ್ಯಮಂತ್ರಿಗಳೇ ಬಂದಿರುವಾಗ ಆ ಪ್ರಶ್ನೆಯೇ ಉದ್ಭವಿಸಬಾರದು ಎಂದು ನೆರೆದಿದ್ದವರಿಗೆ ನೆರವು ನೀಡುವ ಭರವಸೆ ನೀಡಿದರು. ಅಗತ್ಯವಿರುವ ಕಡೆ ಗಂಜಿ ಕೇಂದ್ರಗಳನ್ನು ತೆರೆಯಬೇಕು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಠೇವಣಿ ಹಣವನ್ನು ಪರಿಹಾರ ಕೇಂದ್ರಕ್ಕೆ ಬಳಸಿಕೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಬಿಟ್ಟು ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಸೂಚಿಸಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Heavy rain Flood Mansoon


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ