ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ !

Kannada News

12-06-2017 561

ಬೆಂಗಳೂರು:-  ಗುತ್ತಿಗೆ ಆಧಾರದ ಮೇಲೆ ನಗರಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ನಗರಪಾಲಿಕೆಗಳಲ್ಲಿ ಕಾರ್ಯರ್ನಿಹಿಸುತ್ತಿರುವ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿದರು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು ಕಳೆದ 2013 ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಗುತ್ತಿಗೆ ಪೌರ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿ ಅಧಿಕಾರಕ್ಕೆ ಬಂದು 4 ವರ್ಷಗಳನ್ನು ಪೂರ್ಣಗೊಳಿಸಿದ್ದರೂ, ಖಾಯಂಗೊಳಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ಸರ್ಕಾರ ಮುಂದಾಗದಿದ್ದರೆ ಸ್ವಚ್ಛತಾ ಕಾರ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮೈಸೂರಿನ 65 ವಾರ್ಡುಗಳಲ್ಲಿ 2,000ಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರು, 570 ಖಾಯಂ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಬೆಳಿಗ್ಗೆಯಿಂದಲೆ ಕರ್ತವ್ಯಕ್ಕೆ ಗೈರು ಹಾಜರಾಗುವ ಪೌರಕಾರ್ಮಿಕರು ನಗರಪಾಲಿಕೆಯ ಮುಂಭಾಗ ಮುಷ್ಕರ ಆರಂಭಿಸಿದ್ದಾರೆ. ಇವರೊಂದಿಗೆ ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುವ 176 ಮಂದಿ, ಕಸ ಸಾಗಿಸುವ ಆಟೋ, ಟಿಪ್ಪರ್ ಚಾಲನೆ ಮಾಡುವ 150 ಮಂದಿ, ನೀರು ಸರಬರಾಜು ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುವ 80 ಮಂದಿ ಹಾಗೂ ಕಸ ಸಂಗ್ರಹಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು ಮುಷ್ಕರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎನ್. ಮಾರಾ ಮಾತನಾಡಿ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಅವರನ್ನು ಖಾಯಂಗೊಳಿಸುವಂತೆ ಒತ್ತಾಯಿಸುವುದೇ ನಮ್ಮ ಪ್ರಮುಖ ಗುರಿಯಾಗಿದ್ದು, ಹಾಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಸರ್ಕಾರ ಆದೇಶ ಹೊರಡಿಸುವವರೆಗೂ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು. ಪ್ರತಿದಿನ 5 ಜನರಂತೆ ಉಪವಾಸ ಸತ್ಯಗ್ರಹವನ್ನು ನಡೆಸುತ್ತೇವೆ. ಇಂದು ಆರಂಭಿಸಲಾಗಿರುವ ಮುಷ್ಕರದ ಮಾಹಿತಿಯನ್ನು ಸೇರಿದಂತೆ ನಗರ ಪಾಲಿಕೆಯ ಎಲ್ಲಾ 65 ಸದಸ್ಯರಿಗೂ ಮಾಹಿತಿಯನ್ನು ನೀಡಿ ತಮ್ಮ ಸಹಕಾರವನ್ನು ನೀಡುವಂತೆ ಕೋರಲಾಗಿದೆ. ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿರುವುದರಿಂದ ನಗರದ ಸಾರ್ವಜನಿಕರಿಗೆ ಉಂಟಾಗುವ ತೊಂದರಗೆ ವಿಷಾದ ವ್ಯಕ್ತಪಡಿಸಲಾಗಿದೆ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ