ಒಂದೆಡೆ ಪ್ರವಾಹ.. ಮತ್ತೊಂದೆಡೆ ಬರ..!

Flood

06-08-2019

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೊಡಗು ಹೊರತುಪಡಿಸಿದರೆ ಕಾವೇರಿ ಕೊಳ್ಳದಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಇದರ ಪರಿಣಾಮ ಜಲಾಶಯಗಳಲ್ಲಿ ನೀರಿನ ಬರ ಎದುರಾಗಿದೆ.
ಮೋಡ ಬಿತ್ತನೆ ಮಾಡಿ ಕೃತಕ ಮಳೆ ಸುರಿಸುವ ಕಾರ್ಯಕ್ರಮಕ್ಕೂ ಈ ಬಾರಿ ತೀವ್ರ ಹಿನ್ನೆಡೆಯಾಗಿದ್ದು, ಮೋಡ ಬಿತ್ತನೆ ಬಹುತೇಕ ವಿಫಲವಾಗಿದೆ. ಇದರಿಂದಾಗಿ ಕಾವೇರಿ ಜಲಾಶಯಗಳಲ್ಲಿ ಕಳೆದ 33 ವರ್ಷಗಳಲ್ಲಿ ಮೂರನೇ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಡಿಮೆ ನೀರು ಸಂಗ್ರಹವಾಗಿದ್ದು, ಕಾವೇರಿ ಭಾಗದಲ್ಲಿ ಕೃಷಿ ಚಟುವಟಿಕೆಗೆ ನೀರು ದೊರೆಯುವುದು ಮರಿಚಿಕೆಯಾಗಿದೆ. ಇದೀಗ ಕಾವೇರಿಯನ್ನೇ ನಂಬಿರುವವರಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ಅತಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಕೃಷ್ಣರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಈವರೆಗೆ ಸಂಗ್ರಹವಾಗಿರುವ ಒಟ್ಟು ನೀರಿನ ಪ್ರಮಾಣ 40 ಟಿಎಂಸಿ ಮಾತ್ರ. ಕಳೆದ 1987 ರಲ್ಲಿ ಬರ ಪರಿಸ್ಥಿತಿ ಎದುರಾದಾಗ ಕಾವೇರಿ ನದಿಯ ಎಲ್ಲಾ ನಾಲ್ಕು ಜಲಾಶಯಗಳಲ್ಲಿ 35 ಟಿ.ಎಂ.ಸಿ. ನೀರು ಸಂಗ್ರಹವಾಗಿತ್ತು. ಬಳಿಕ 2012 ರಲ್ಲಿ 39 ಟಿ.ಎಂ.ಸಿ ನೀರಿತ್ತು. ಈ ಭಾಗದಲ್ಲಿ ಈಗ ಒಟ್ಟಾರೆ 43 ರಿಂದ 44 ಟಿ.ಎಂ.ಸಿ. ನೀರು ಬೀಳುವಷ್ಟು ಮಾತ್ರ ಮಳೆಯಾಗಿದೆ. ಆದರೆ ವಾರ್ಷಿಕ ಸರಾಸರಿ 135 ಟಿಎಂಸಿ ಯಷ್ಟು ಮಳೆಯಾಗಬೇಕಾಗಿತ್ತು. ಅಂದರೆ ಶೇ 70 ರಷ್ಟು ಮಳೆ ಕೊರತೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 265 ಟಿ.ಎಂ.ಸಿ ನೀರು ಸಂಗ್ರಹವಾಗುಷ್ಟು ಮಳೆಯಾಗಿತ್ತು.
ವಿಶೇಷ ಎಂದರೆ ಪ್ರತಿವರ್ಷ ಕಬಿನಿ ಜಲಾಶಯ ಮೊದಲು ಭರ್ತಿಯಾಗುತ್ತಿತ್ತು. ಆದರೆ ಕೇರಳದ ವೈನಾಡಿನಲ್ಲಿ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದ್ದು, ಸರಾಸರಿ ಮಳೆಯಲ್ಲಿ ಅರ್ಧದಷ್ಟು ಕೊರತೆ ಕಂಡು ಬಂದಿದೆ. ಈ ವೇಳೆಗಾಗಲೇ ಕಬಿನಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಬೇಕಾಗಿತ್ತು.
ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕಾವೇರಿ ಜಲಾಶಯಗಳು ತುಂಬಿ ಹರಿದಿತ್ತು. ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗಿತ್ತು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕೃತಕ ಮಳೆ ತರಿಸುವ ಮೋಡ ಬಿತ್ತನೆ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಆದರೆ ಮಳೆ ತರಿಸುವ ಮೋಡಗಳಿಗೂ ಅಭಾವ ಕಂಡು ಬಂದಿದೆ.
ಮೋಡ ಬಿತ್ತನೆಗಾಗಿ ಬೆಂಗಳೂರು, ಗದಗ ಮತ್ತು ಶಹಾಪುರದಲ್ಲಿ ರಡಾರ್ ಗಳನ್ನು ಸ್ಥಾಪಿಸಲಾಗಿದ್ದು, ಎರಡು ವಿಶೇಷ ಜಟ್ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಆದರೆ ಮಳೆ ತರಿಸಲು ಫಲಭರಿತ ಮೋಡಗಳೇ ಮಾಯವಾಗಿವೆ. ಮೋಡ ಬಿತ್ತನೆ ಕಾರ್ಯಕ್ರಮದಲ್ಲಿ ತೊಡಗಿರುವ ಅಧಿಕಾರಿಗಳು, ಸಿಬ್ಬಂದಿ ಮೋಡಗಳನ್ನು ಬೆನ್ನತ್ತಿ ಹೈರಾಣಾಗಿದ್ದಾರೆ.
ಕಾವೇರಿ ನದಿಪಾತ್ರದಲ್ಲಿ ಮಳೆ ಕೊರತೆಯಾಗಿರುವ ಕಾರಣ ನೀರು ಬಿಡುಗಡೆಗೆ ತಮಿಳುನಾಡು ಒತ್ತಡ ತಂತ್ರ ಅನುಸರಿಸುತ್ತಿದ್ದು, ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಕೆ.ಆರ್.ಎಸ್ ನಿಂದ 9 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಇದೀಗ ತೊಂದರೆಗೆ ಸಿಲುಕಿದ್ದು, ಸಮರ್ಪಕವಾಗಿ ಮಳೆಯಾಗದಿದ್ದರೆ ಸಂಕಷ್ಟ ಸೂತ್ರದನ್ವಯ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಮನವಿ ಮಾಡುವುದು ಬಿಟ್ಟರೆ ಬೇರೆ ದಾರಿ ಇಲ್ಲದಂತಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ, ದಕ್ಷಿಣ ಒಳನಾಡಿನಲ್ಲಿ ಸೋಮವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ಕೊಳ್ಳದಲ್ಲೂ ಮಳೆಯಾಗಲಿದೆ. ಕೊಡಗು ಸುತ್ತಮುತ್ತ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಸ್ವಲ್ಪ ಮಟ್ಟಿಗೆ ನೀರು ಹರಿದು ಬರುವ ನಿರೀಕ್ಷೆ ಇದೆ ಎಂದರು.
ಆದರೆ ನೈರುತ್ಯ ಮುಂಗಾರು ಹಂಗಾಮಿನಲ್ಲಿ ರಭಸದ ಮಳೆ ಸುರಿಯುವ ಅವಧಿ ಮುಗಿದಿದ್ದು, ಸಾಧಾರಣದಿಂದ ಕೂಡಿದ ಹಗುರ ಮಳೆಯಾಗಲಿದೆ. ಹೀಗೆ ನಿರಂತರವಾಗಿ ಮಳೆ ಸುರಿದರೆ ಕಾವೇರಿ ಜಲಾಶಯಗಳಿಗೆ ಜೀವ ಕಳೆ ಬರಲಿದೆ. ಇಲ್ಲವಾದಲ್ಲಿ ಕುಡಿಯುವ ನೀರಿಗೂ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

KRS North karnataka Flood Heavy rain


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ