ಉತ್ತರ ಕರ್ನಾಟಕದಲ್ಲಿ ಜಲಪ್ರಳಯ ಭೀತಿ

Flood Situation in North Karnataka

06-08-2019

ಬೆಂಗಳೂರು: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಕೋಯ್ನಾ ಡ್ಯಾಂನಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ಹರಿಸಲಾಗುತ್ತಿರುವ ನೀರು ಉತ್ತರ ಕರ್ನಾಟಕದ ಹಲವೆಡೆ ಜಲಪ್ರಳಯ ಸೃಷ್ಟಿಸಿದೆ.

ಅಲ್ಲದೇ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ, ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ಹರಿಯುತ್ತಿರುವ ನೀರಿನಿಂದಾಗಿ ಕೃಷ್ಣಾ, ಮಲಪ್ರಭಾ, ವೇದಗಂಗಾ, ದೂದ್ ಗಂಗಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಯಾದಗಿರಿಯ ಬಸವಸಾಗರ ತುಂಬಿ ಹರಿಯುತ್ತಿದ್ದು, ಕೊಳ್ಳೂರು ಗ್ರಾಮ ಸೇತುವೆ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿದೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಸೇತುವೆ ಮುಳುಗಡೆಯಾಗಿದೆ. ಶರಣ ಗಂಗಾಂಬಿಕಾ ಐಕ್ಯಮಂಟಪ ಜಲಾವೃತಗೊಂಡಿದೆ. ಖಾನಾಪುರ ತಾಲೂಕಿನ ಹಬ್ಬನಟ್ಟಿಯ ಮಾರುತಿ ಮಂದಿರದ ಕಲಶದವರೆಗೂ ಪ್ರವಾಹ ಬಂದಿದೆ. ಖಾನಾಪುರ ತಾಲೂಕಿನ ಪಾರಿಶ್ವಾಡದಲ್ಲಿ ಮನೆ ಮತ್ತು ಮೇವಿನ ಬಣವೆಯೊಂದು ಮುಳುಗಡೆಯಾಗಿದೆ.

ಮುಂಬೈನಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೊಯ್ನಾ ನದಿಯಿಂದ ನೀರನ್ನು ಮತ್ತಷ್ಟು ಹೊರಬಿಡುವ ಸಾಧ್ಯತೆಯಿದ್ದು, ಉತ್ತರ ಕರ್ನಾಟಕದ ಜನತೆ ಸಂಕಷ್ಟಕ್ಕೀಡಾಗಲಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಾಗಿದೆ. ನದಿ ಪಾತ್ರದ ಜನರನ್ನು ಸ್ಥಳಾಂತರ ಮಾಡಿರುವುದು, ಗಂಜಿ ಕೇಂದ್ರಗಳ ಸ್ಥಾಪನೆ, ಕಾರ್ಯಾಚರಣೆಗೆ ಎನ್‍ಡಿಆರ್‍ಎಫ್ ಪಡೆ ನಿಯೋಜನೆ ಮಾಡಲಾಗಿದ್ದು, ಈಗಾಗಲೇ ಕಾರ್ಯೋನ್ಮುಖವಾಗಿದೆ.

ಮುಂಗಾರು ಚುರುಕು

ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಮುಂದಿನ ಮೂರ್ನಾಲ್ಕು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ವಾತಾವರಣದಲ್ಲಿ ಬದಲಾವಣೆ ಉಂಟಾಗಿದ್ದು, ಕರಾವಳಿ, ಕೊಡಗು, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.


ಸಂಬಂಧಿತ ಟ್ಯಾಗ್ಗಳು

Flood Maharashtra North Karnataka Heavy rain


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ