ಕನ್ನಡ ಪರ ಸಂಘಟನೆಗಳಲ್ಲಿ ಬಿರುಕು !

Kannada News

12-06-2017

ಬೆಂಗಗಳೂರು:- ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ, ರೈತರ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲವಾಗುವುದರೊಂದಿಗೆ ಕನ್ನಡ ಪರ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ. ಬಂದ್‍ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರೆ ಇದೇ ವೇಳೆ ಕರ್ನಾಟಕವನ್ನು ವಾಟಾಳ್ ನಾಗರಾಜ್‍ಗೆ ಬರೆದುಕೊಟ್ಟಿಲ್ಲ ಎಂದು ನಾರಾಯಣ ಗೌಡ ತಿರುಗೇಟು ನೀಡಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಎಲ್ಲ ವಿಷಯಗಳಲ್ಲೂ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಕನ್ನಡ ಪರ ಸಂಘಟನೆಗಳಲ್ಲಿ ಬಿರುಕು ಕಂಡುಬಂದಿದೆ.

 ಕನ್ನಡ ಪರ ಸಂಘಟನೆಗಳ ಮುಖಂಡರ ನಡುವಿನ ಸ್ವಪ್ರತಿಷ್ಠೆಯಿಂದಾಗಿ ಒಗ್ಗಟ್ಟು ಮುರಿದು ಹೋದಂತಾಗಿದೆ. ಕನ್ನಡಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಕರ್ನಾಟಕ ಬಂದ್‍ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ವಿರುದ್ಧವೇ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲಾಗಿದೆ. ಸುಮ್ಮನಹಳ್ಳಿ ಸೇತುವೆ ಸಮೀಪ ವಾಟಾಳ್ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯವನ್ನು ವಾಟಾಳ್ ನಾಗರಾಜ್ ಅವರಿಗೆ ಬರೆದುಕೊಟ್ಟಿಲ್ಲ. ಪದೇ, ಪದೇ ರಾಜ್ಯ ಬಂದ್ ನಡೆಸುವುದರಿಂದ ಯಾರಿಗೆ ಲಾಭವಿದೆ. ಕನ್ನಡಪರ ಸಂಘಟನೆಗಳು ಸಚಿವರು, ಶಾಸಕರು, ಸಚಿವರ ಮನೆ ಎದುರು ಪ್ರತಿಭಟನೆ ನಡೆಸಬೇಕು. ಅದನ್ನು ಬಿಟ್ಟು ನಾನು ಹೇಳಿದ್ದೇ ಅಂತಿಮ ಎನ್ನುವವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ವಾಟಾಳ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ನಡುವೆ ಕನ್ನಡ ಪರ ಸಂಘಟನೆಗಳ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಕರ್ನಾಟಕ ಬಂದ್ ವಿಫಲವಾಗಿಲ್ಲ. ನಾರಾಯಣ ಗೌಡರು ಸ್ವಪ್ರತಿಷ್ಠೆಯನ್ನು ಬಿಡಬೇಕಾಗಿತ್ತು. ಬಂದ್ ವಿಫಲಗೊಳಿಸಲು ಪಿತೂರಿ ನಡೆಸಿದವರ ಹೆಸರನ್ನು ಶೀಘ್ರವೇ ಬಹಿರಂಗಗೊಳಿಸುತ್ತೇವೆ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿರುಗೇಟು ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ