ಕೆಲಸ ಮಾಡಿ, ಇಲ್ಲವೇ ಮನೆಗೆ ಹೋಗಿ: ಸಿಎಂ ವಾರ್ನಿಂಗ್

BS Yediyurappa Statement

02-08-2019

ಬೆಂಗಳೂರು: ಜಿಲ್ಲಾಡಳಿತ ಸರಿಯಾಗಿ ಕೆಲಸ ಮಾಡಿದರೆ ಜನ ನನ್ನ ಬಳಿ ದೂರು ತೆಗೆದುಕೊಂಡು ಬರುವುದು ತಪ್ಪುತ್ತದೆ. ಅವರು ದೂರು ತೆಗೆದುಕೊಂಡು ಬರದಂತೆ ನೀವು ನೋಡಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಎಂದು ಅಧಿಕಾರಿಗಳಿಗೆ ನೇರವಾಗಿ ಹೇಳಿರುವ ಯಡಿಯೂರಪ್ಪ, ಜನರ ತೆರಿಗೆ ಹಣದಿಂದ ಬದುಕುತ್ತಿದ್ದೇವೆ ಎಂಬ ಪ್ರಜ್ಞೆ ಇಲ್ಲದಿದ್ದರೆ ನಾವೆಲ್ಲ ಇದ್ದೂ ಸತ್ತಂತೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಜತೆ ಸಭೆ ನಡೆಸಿದ ಅವರು, ಆಡಳಿತ ಯಂತ್ರ ಚುರುಕಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಮನೆಗೆ ಹೋಗಲು ತಯಾರಿರಬೇಕು ಎಂದು ಹೇಳಿದ್ದಾರೆ.
ರಾಜ್ಯದ ಜನ ತಮ್ಮ ಕೆಲಸಗಳಿಗೆ ರಾಜಧಾನಿಗೆ ಅಲೆದಾಡದಂತೆ ನೋಡಿಕೊಳ್ಳಬೇಕು ಎಂದರೆ ಜಿಲ್ಲಾಡಳಿತ ಚುರುಕಾಗಬೇಕು.ಕಾನೂನಿನ ನೆಪದಲ್ಲಿ ಅವರ ಕೆಲಸಗಳಿಗೆ ಕಡಿವಾಣ ಹಾಕುವ ಪ್ರವೃತ್ತಿ ತಪ್ಪಬೇಕು ಎಂದರು. ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ. ಮಳೆಯ ಪ್ರಮಾಣ ವಾಡಿಕೆಗಿಂತ ಶೇಕಡಾ 42 ರಷ್ಟು ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಜನ ಹಾಗೂ ಜಾನುವಾರುಗಳು ಪರದಾಡುವುದು ನಿಶ್ಚಿತ. ಈ ಸಮಸ್ಯೆಯನ್ನು ನಿವಾರಿಸಲು ನೀವು ದುಡಿಯಬೇಕು ಎಂದರು.
ಬರಗಾಲ ಪರಿಹಾರ ಕಾಮಗಾರಿಗಾಗಿ 600 ಕೋಟಿ ರೂಗಳಿಗಿಂತ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ.ಅದನ್ನು ಪಿಡಿ ಅಕೌಂಟ್‍ಲ್ಲಿಟ್ಟು ಪೂಜೆ ಮಾಡಬೇಡಿ ಎಂದು ಅವರು ಹೇಳಿದರು. ಇನ್ನು ಮುಂದೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಪ್ರತಿ ತಿಂಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ಕೊಡಬೇಕು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಾರದಲ್ಲಿ ಎರಡು ದಿನ ಜಿಲ್ಲಾ ಪ್ರವಾಸ ಮಾಡಬೇಕು ಎಂದು ಅವರು ಸೂಚಿಸಿದರು.
ನೀವು ಖುದ್ದಾಗಿ ಜನರ ಕಷ್ಟಗಳನ್ನು ನೋಡಿ ಬನ್ನಿ. ಆಗ ಆಡಳಿತ ಯಾವ್ಯಾವ ಹಂತಗಳಲ್ಲಿ ಚುರುಕಾಗಬೇಕು ಎಂಬುದು ನಿಮಗೇ ಅರಿವಾಗುತ್ತದೆ ಎಂದ ಅವರು, ಹಿರಿಯ ಅಧಿಕಾರಿಗಳು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗಿ. ಅದು ನಿಮ್ಮ ಕೆಳಗಿರುವ ಅಧಿಕಾರಿಗಳು, ಸಿಬ್ಬಂದಿಗೂ ಎಚ್ಚರಿಕೆಯ ಗಂಟೆಯಾಗುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

BS Yediyurappa Warning Karnataka CM Development


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ