ಮೆಟ್ರೋ ಸ್ಟೇಷನ್ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು

Cracks had been noticed on Namma Metro pillar

02-08-2019

ಬೆಂಗಳೂರು: ಇಂದಿರಾನಗರ ಮೆಟ್ರೋ ಸ್ಟೇಷನ್ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಪ್ರಯಾಣಿಕರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಆದರೆ ಬಿರುಕು ಕಂಡುಬಂದಿರುವುದನ್ನು ಬಿಎಂಆರ್‍ಸಿಎಲ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಕಳಪೆ ಕಾಮಗಾರಿಯಿಂದ ಪಿಲ್ಲರ್ ಬೇರಿಂಗ್‍ನಲ್ಲಿ ಬಿರುಕು ಮೂಡಿದೆ ಎನ್ನಲಾಗಿದ್ದು ಆದರೆ ಪ್ರಯಾಣಿಕರನ್ನು ಕಣ್ಣತಪ್ಪಿಸಿ ಬಿಎಂಆರ್‍ಸಿಎಲ್ ದುರಸ್ತಿ ಮಾಡುವುದಕ್ಕೆ ಹೊರಟಿದೆ. ಇದರಿಂದಾಗಿ ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದೆ. ಆರು ತಿಂಗಳ ಹಿಂದೆಯಷ್ಟೇ ಇದೇ ಮಾರ್ಗದಲ್ಲಿ ಮೆಟ್ರೋ ಸಮಸ್ಯೆ ಶುರುವಾಗಿತ್ತು. ಕಳೆದ ಬಾರಿ ಟ್ರಿನಿಟಿ ಸ್ಟೇಷನ್‍ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೆಟ್ರೋ ಮೊದಲ ಹಂತದ ಮೊದಲಾರ್ಧದಲ್ಲಿ ಉದ್ಘಾಟನೆಯಾದ ಭಾಗ ಇದಾಗಿದೆ. ಆದರೆ ಇದೇ ಮಾರ್ಗದಲ್ಲಿ ಎರಡನೇ ಬಾರಿ ಸಮಸ್ಯೆ ಎದುರಾಗಿದೆ.
ಜುಲೈ 30 ರಂದು ಬಿಎಂಆರ್‍ಸಿಎಲ್ ಪ್ರಕಟಣೆಯೊಂದನ್ನು ಹೊರಡಿಸಿ ನೆರಳೆ ಮಾರ್ಗದ ಎಂಜಿ ರೋಡ್‍ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿರ್ವಹಣೆ ಎಂದು ಮಾಹಿತಿ ನೀಡಿದ ಬೆನ್ನಲ್ಲೇ ಪಿಲ್ಲರ್ ಬೇರಿಂಗ್ ಸಮಸ್ಯೆ ಬಯಲಾಗಿದೆ. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ನಿರ್ವಹಣೆ ಕೆಲಸಕ್ಕಾಗಿ ನೇರಳೆ ಮಾರ್ಗದಲ್ಲಿನ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಆಗಸ್ಟ್ 3ರ ರಾತ್ರಿ 9:30ರಿಂದ ಆ. 4ರ ಬೆಳಗ್ಗೆ 11 ಗಂಟೆವರೆಗೆ ಮೆಟ್ರೋ ರೈಲಿನ ಸೇವೆಗಳು ಲಭ್ಯವಿರುವುದಿಲ್ಲ.
ಆಗಸ್ಟ್ 3ರಂದು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ಸೇವೆಯ ಕೊನೆ ರೈಲು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ರಾತ್ರಿ 9:30 ಗಂಟೆಗೆ ಹಾಗೂ ಮೈಸೂರು ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣದ ಕಡೆಗಿನ ಕೊನೆಯ ರೈಲು ರಾತ್ರಿ 9 ಗಂಟೆಗೆ ಹೊರಡಲಿದೆ. ಅದಾಗ್ಯೂ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಆಗಸ್ಟ್ 3ರ ರಾತ್ರಿಯ ಸೇವೆ ಮುಕ್ತಾಯದವರೆಗೂ ಹಾಗೂ ಆ.4ರಂದು ಬೆಳಗ್ಗೆ 7:00 ಗಂಟೆಯಿಂದ 11:00 ಗಂಟೆಯವರೆಗೆ ಮೆಟ್ರೋ ರೈಲಿನ ಸೇವೆಗಳು ಲಭ್ಯವಿರುತ್ತವೆ.
ಆ. 4 ರಂದು ಬೆಳಗ್ಗೆ 11 ಗಂಟೆಯ ನಂತರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣದ ಮೆಟ್ರೋ ರೈಲಿನ ಸೇವೆಗಳು ದಿನನಿತ್ಯದಂತಿರುತ್ತವೆ. ಹಸಿರು ಮಾರ್ಗದ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನ ಸೇವೆಗಳು ನಿಗದಿಯಂತೆ ನಡೆಯುತ್ತವೆ.


ಸಂಬಂಧಿತ ಟ್ಯಾಗ್ಗಳು

Namma Metro Metro Train Metro Piller M G Road


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ