"ಜನರ ಸಂಕಷ್ಟಕ್ಕೆ ಸ್ಪಂದಿಸಿದೇ ಹೋದರೆ ತಕ್ಕ ಶಾಸ್ತಿ"

B S Yediyurappa Statement

02-08-2019

ಬೆಂಗಳೂರು: ಬರಗಾಲವನ್ನು ಸಮರ್ಪಕವಾಗಿ ಎದುರಿಸಲು ಅಧಿಕಾರಿಗಳು ಮೈ ಚಳಿ ಬಿಟ್ಟು ಕಾರ್ಯ ನಿರ್ವಹಿಸಬೇಕು, ಜಿಲ್ಲಾಧಿಕಾರಿಗಳ ಖಜಾನೆಯಲ್ಲಿರುವ ಹಣವನ್ನು ಬಳಸಿಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಉದಾಸೀನ ತೋರಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ  ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಸಿದರು.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಇಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು ಸೇರಿದಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಬರಗಾಲ ನಿರ್ವಹಣೆ ಕುರಿತಂತೆ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.
ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಕೆ, ತಕ್ಷಣವೇ ಗೋ ಶಾಲೆ ಆರಂಭಿಸುವುದು, ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಒದಗಿಸುವುದು ಸೇರಿದಂತೆ ಬರಪೀಡಿತ ತಾಲ್ಲೂಕುಗಳಲ್ಲಿ ಸಮರೋಪಾದಿಯಾಗಿ ಕಾಯ ನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾವಾರು ಮಾಹಿತಿ ಪಡೆದ ಯಡಿಯೂರಪ್ಪ, ಆಗಸ್ಟ್ ತಿಂಗಳು ಸಮೀಪಿಸಿದರೂ ಸುಮಾರು 98ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಗಂಭೀರ ಪರಿಸ್ಥಿತಿ ಇರುವ ತಾಲ್ಲೂಕುಗಳಲ್ಲಿ ಕೂಡಲೇ ಸರ್ಕಾರಿ ಹಾಗೂ ಖಾಸಗಿ ಟ್ಯಾಂಕರ್‍ಗಳ ಮೂಲಕ ನೀರನ್ನು ಖರೀದಿಸಿ ಪೂರೈಕೆ ಮಾಡುವಂತೆ ಸೂಚಿಸಿದ್ದಾರೆ.
ಖಾಸಗಿಯವರಿಂದ ಎಷ್ಟೇ ಹಣ ಖರ್ಚಾದರೂ ಸರಿ ಖರೀದಿ ಮಾಡಿ ಪ್ರತಿಯೊಬ್ಬರಿಗೂ ನೀರು ಒದಗಿಸಬೇಕು. ಹಣದ ಬಗ್ಗೆ ಯಾರೊಬ್ಬರೂ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ನಿಮ್ಮ ಖಜಾನೆಯಲ್ಲಿರುವ ಹಣವನ್ನು ಖರ್ಚು ಮಾಡಿಕೊಳ್ಳಿ. ಅಗತ್ಯವಿರುವ ಕಡೆ ಕೂಡಲೇ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟರು.
ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ತೀರ್ಮಾನ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಕುಡಿಯುವ ನೀರು ಸರಬರಾಜು ಮತ್ತು ಮೇವಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸಬೇಕೆಂದು ತಾಕೀತು ಮಾಡಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Vidhana soudha Karnataka CM Development


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ