ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ!

Karnataka Government

02-08-2019

ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐಎಎಸ್, ಐಪಿಎಸ್, ಐಎಫ್‍ಎಸ್ ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆಗೆ ನಿರ್ಧರಿಸಿದ್ದು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಲು ಮುಂದಾಗಿದ್ದಾರೆ.
ಪ್ರಮುಖವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಡಿಎ ಆಯುಕ್ತರು ಸೇರಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿದ್ದ ಅಧಿಕಾರಿಗಳನ್ನು ಒಂದೆರಡು ದಿನಗಳಲ್ಲೇ ಎತ್ತಂಗಡಿ ಮಾಡಲಿದ್ದಾರೆ.
ಈಗಾಗಲೇ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ಧವಾಗಿದ್ದು, ಕೆಲವು ಅಧಿಕಾರಿಗಳಿಗೆ ಮುಂಬಡ್ತಿ ಹಾಗೂ ಇನ್ನು ಕೆಲವು ವರ್ಗಾವಣೆಯ ಬಿಸಿ ತಟ್ಟಲಿದೆ. ಐಪಿಎಸ್‍ನಂತೆ ಐಎಎಸ್ ವಲಯದಲ್ಲೂ ಭಾರೀ ಬದಲಾವಣೆಯಾಗುವ ಸಂಭವವಿದೆ. ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್  ಅವರನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು, ಉಳಿದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಆಯಾ ಕಟ್ಟಿನಲ್ಲಿದ್ದ ಪ್ರಮುಖರನ್ನು ಸದ್ಯದಲ್ಲೇ ಎತ್ತಂಗಡಿ ಮಾಡಲಿದ್ದಾರೆ.
ಮುಖ್ಯವಾಗಿ ಬೃಹತ್ ಬೆಂಗಳೂರು ಮಹಾನಗರ  ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್ ಎತ್ತಂಗಡಿ ಯಾಗುವುದು ಬಹುತೇಕ ಖಚಿತ. ಕಳೆದ ಹಲವು ವರ್ಷಗಳಿಂದ ಈ ಹುದ್ದೆಯಲ್ಲಿರುವ ಅವರನ್ನು ವರ್ಗಾವಣೆ ಮಾಡುವುದು ಖಚಿತ.
ತೆರವಾಗಲಿರುವ ಈ ಸ್ಥಾನಕ್ಕೆ ಹಿರಿಯ ಅಧಿಕಾರಿಯೊಬ್ಬರನ್ನು ಆಯುಕ್ತರಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಇದೇ ರೀತಿ ಬಿಡಿಎ ಆಯುಕ್ತರ ಹುದ್ದೆಯೂ ಸ್ಥಾನ ಪಲ್ಲಟವಾಗಲಿದೆ. ವಲಯ ಆಯುಕ್ತರು, ಜಿಲ್ಲಾಧಿಕಾರಿಗಳು, ಸಚಿವಾಲಯದಲ್ಲಿರುವ ಪ್ರಮುಖ ಅಧಿಕಾರಿಗಳು ಕೂಡ ವರ್ಗಾವಣೆಯಾಗುವ ನಿರೀಕ್ಷೆಯಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa Alok Kumar Karnataka CM BBMP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ