ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಸ್ತು

BS Yedyurappa Government Cabinet

02-08-2019

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಆಗಸ್ಟ್ 9 ರಂದು ವಿಸ್ತರಣೆಯಾಗಲಿದೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಯಡಿಯೂರಪ್ಪ ಮತ್ತಿತರ ನಾಯಕರು ಆ.7 ರಂದು ದೆಹಲಿಗೆ ತೆರಳಲಿದ್ದು, ವರಿಷ್ಠರೊಂದಿಗೆ ಚರ್ಚಿಸಿದ ನಂತರ ಮೊದಲ ಕಂತಿನ ಸಂಪುಟ ವಿಸ್ತರಣೆ ನಡೆಯಲಿದೆ. ಅಮಿತ್ ಶಾ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಆಗಸ್ಟ್ 9ರಂದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೊತೆಗೆ ಸಂಪುಟ ರಚನೆಗೆ ಮುನ್ನ ಆಗಸ್ಟ್ 7ರಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. 
ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎನ್ನುವ ನಿರ್ಧಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಅಮಿತ್ ಶಾ ಅವರು, ಮಂತ್ರಿಗಿರಿ ಲಾಬಿ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜಿಲ್ಲಾವಾರು ಶಾಸಕರ ರಿಪೋರ್ಟ್ ಗಳನ್ನು ತರಿಸಿಕೊಂಡಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ಕೈಯಲ್ಲಿರುವ ಎರಡು ಪಟ್ಟಿಗಳನ್ನು ತಾಳೆ ಮಾಡಿ ಫೈನಲ್ ಲಿಸ್ಟ್ ಸಿದ್ಧಗೊಳಿಸಲಿದ್ದಾರೆ
ಮೊದಲ ಕಂತಿನಲ್ಲಿ ಹತ್ತು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ರಾಜೀನಾಮೆ ನೀಡಿ ಅನರ್ಹಗೊಂಡಿರುವ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಇತ್ಯರ್ಥವಾದರೆ ಎರಡನೆ ಕಂತಿನಲ್ಲಿ ಇಪ್ಪತ್ತು ಮಂದಿ ಸಚಿವರಾಗಲಿದ್ದಾರೆ.
ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರನ್ನು ಸೇರಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಆದರೆ ವರಿಷ್ಠರು ಇದಕ್ಕೆ ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಹೀಗಾಗಿ ಈ ವಿಷಯದಲ್ಲಿ ಕೊಂಚಮಟ್ಟಿಗೆ ಗೊಂದಲ ಉಂಟಾಗಿದೆ.
ರಾಜೀನಾಮೆ ನೀಡಿ ಅನರ್ಹತೆಯ ಶಿಕ್ಷೆಗೊಳಗಾಗಿರುವ ಶಾಸಕರನ್ನು ಕೈ ಬಿಟ್ಟು ಮಂತ್ರಿ ಮಂಡಲ ವಿಸ್ತರಣೆ ಮಾಡಿದರೆ ನಾವೂ ವಚನ ಭ್ರಷ್ಟತೆಯ ಆರೋಪ ಹೊರಬೇಕಾಗುತ್ತದೆ ಎಂದು ಹೇಳಿದ್ದಾರೆ. ಅನರ್ಹಗೊಂಡಿರುವ ಶಾಸಕರ ಬಗ್ಗೆ ಯಾರೇನೇ ಹೇಳಿದರೂ ಅವರನ್ನು ಕೈ ಬಿಟ್ಟು ಸಚಿವ ಸಂಪುಟ ವಿಸ್ತರಿಸಿದರೆ ಬಿಜೆಪಿಯನ್ನು ಯಾರೂ ನಂಬುವುದಿಲ್ಲ. ಇದು ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣಕ್ಕೂ ಅನ್ವಯವಾಗುತ್ತದೆ ಎಂಬುದು ಯಡಿಯೂರಪ್ಪನವರ ವಾದ.
ಈ ಹಿನ್ನೆಲೆಯಲ್ಲಿಯೇ  ಆ.5 ರ ಸೋಮವಾರ ಸಚಿವ ಸಂಪುಟ ವಿಸ್ತರಿಸಲು ಹಾಕಿದ್ದ ಲೆಕ್ಕಾಚಾರವನ್ನು ಮುಂದೂಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು ಆ.6ರಂದು ಸಂಸತ್ ಅಧಿವೇಶನ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಆ.7 ರಂದು ದೆಹಲಿಗೆ ಬನ್ನಿ ಎಂದು ಸೂಚಿಸಿದೆ.


ಸಂಬಂಧಿತ ಟ್ಯಾಗ್ಗಳು

BJP Amit shah BS Yediyurappa PM Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ