ಕಾಂಗ್ರೆಸ್ ಅಧ್ಯಕ್ಷಗಾದಿಗೆ ನೋ ಎಂದ ಪ್ರಿಯಾಂಕಾ ಗಾಂಧಿ

Priyanka Gandhi Statement

02-08-2019

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು, ತೆರವಾದ ಈ ಆಯಕಟ್ಟಿನ ಜಾಗಕ್ಕೆ ಇನ್ನೂ ಯಾರ ಹೆಸರೂ ಅಂತಿಮವಾಗಿಲ್ಲ. ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಜನ್ಮದಿನಾಚರಣೆ ಕರೆಯಲಾಗಿದ್ದ ಸಭೆಯಲ್ಲಿ, ಅಧ್ಯಕ್ಷ ಹುದ್ದೆಗೆ ಪ್ರಿಯಾಂಕ ಗಾಂಧಿಯೇ ಸೂಕ್ತ ಆಯ್ಕೆ ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ 'ಅಧ್ಯಕ್ಷ ಹುದ್ದೆಗೆ ಯಾವ ಕಾರಣಕ್ಕೂ ನನ್ನ ಹೆಸರನ್ನು ಎಳೆದು ತರಬೇಡಿ' ಎಂದು ಪ್ರಿಯಾಂಕ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಜಾಗಕ್ಕೆ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 
ಈ ಮಧ್ಯೆ  ಅಧ್ಯಕ್ಷರ ಆಯ್ಕೆ ತುರ್ತಾಗಿ ಆಗಬೇಕಿದೆ ಎಂದು ಹಲವು ಕಾಂಗ್ರೆಸ್ ಮುಖಂಡರು ಒತ್ತಾಯಿಸುತ್ತಲೇ ಇದ್ದಾರೆ. ಅಧ್ಯಕ್ಷ ಪಟ್ಟ ಹಲವು ದಿನಗಳ ಕಾಲ ಖಾಲಿ ಉಳಿದರೆ ಅದು ಪಕ್ಷಕ್ಕೇ ಅಪಾಯಕಾರಿ, ಅದರಿಂದ ಪಕ್ಷದಲ್ಲಿ ಬಿರುಕು ಮೂಡಬಹುದು ಎಂದು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಎಚ್ಚರಿಕೆ ನೀಡಿದ್ದರು. ಅಲ್ಲದೇ, 'ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸುವ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೀಡಿದ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಆದರೆ ಪ್ರಿಯಾಂಕಾ ಗಾಂಧಿ ಅವರು ಆಯ್ಕೆ ಮಾಡಿದ ಅಧ್ಯಕ್ಷರಾಗಬೇಕು, ನೇಮಿಸಿದ ಅಧ್ಯಕ್ಷರಾಗಬಾರದು" ಎಂದು ಶಶಿ ತರೂರ್ ಹೇಳಿದ್ದರು.

"ಪ್ರಿಯಾಂಕಾ ಗಾಂಧಿ ಅವರು ಅಧ್ಯಕ್ಷರಾಗುವುದಾದರೆ ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಅಧ್ಯಕ್ಷರಾಗುವುದಾದರೆ ಅದಕ್ಕೆ ಪಕ್ಷದ ಎಲ್ಲರೂ ಬೆಂಬಲ ಸೂಚಿಸುತ್ತೇವೆ" ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಕೂಡಾ ಬೆಂಬಲ ವ್ಯಕ್ತ ಪಡಿಸಿದ್ದರು.
ಆದರೆ ಇವೆಲ್ಲದಕ್ಕೂ ಪ್ರಿಯಾಂಕಾ ಗಾಂಧಿ ತೆರೆ ಎಳೆದಿದ್ದು, ಅಧ್ಯಕ್ಷ ಗಾದಿಗೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರುವವರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. 


ಸಂಬಂಧಿತ ಟ್ಯಾಗ್ಗಳು

Priyanka Gandhi AICC Congress Rahul Gandhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ