ಬಡವರ ಹಸಿವು ನೀಗಿಸಲು ಫ್ರಿಡ್ಜ್ ವ್ಯವಸ್ಥೆ

Donate for poor

01-08-2019

ಬೆಂಗಳೂರು: ತಿಂದು ಮಿಕ್ಕಿದ ಊಟವನ್ನು ವ್ಯರ್ಥಮಾಡದೇ ಸಂಗ್ರಹಿಸಿ ಅದನ್ನು ಬಡವರ ಹಸಿವು ನೀಗಿಸಲು ಕೂಡುವ ದಾಸ್ತಾನು ಕೇಂದ್ರ (ಫ್ರಿಡ್ಜ್ ವ್ಯವಸ್ಥೆ)ಯನ್ನು ನಗರದಲ್ಲಿ ಆರಂಭಿಸಲಾಗಿದೆ. ಹಲಸೂರು ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದ ಆವರಣದಲ್ಲಿ ವರ್ಕ್ ಬೆಂಚ್ ಹಾಗೂ ಯುವ ಚಿಂತನಾ ಫೌಂಡೇಶನ್ ಸಹಯೋಗದೊಂದಿಗೆ 'ಊಟ, ಆಟ, ಪಾಠ, ಕೂಟ' ಎಂಬ ಫಲಕದಡಿ ಸುಮಾರು 6 ಅಡಿ ಎತ್ತರದ ಸುಸಜ್ಜಿತ ಫ್ರಿಡ್ಜ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಹಸಿದವರು ಊಟ-ತಿಂಡಿಯನ್ನು ಉಚಿತವಾಗಿ ತೆಗೆದು ಕೊಂಡು ತಿನ್ನುವ ವಿಶೇಷ ಅವಕಾಶ ಇದರಿಂದ ಲಭ್ಯವಾಗಲಿದ್ದು ಹಸಿವನ್ನು ನೀಗಿಸುವ ಈ ವ್ಯವಸ್ಥೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್‍ಗಳಲ್ಲಿ ಉಳಿದ ಊಟವನ್ನು ಈ ಫ್ರಿಡ್ಜ್‍ನಲ್ಲಿ ತಂದಿಡಲಾಗುತ್ತದೆ. ಯಾವ ತಿಂಡಿ, ಊಟವಿರುತ್ತದೋ ಹಸಿದವರು ಅದನ್ನು ತಿನ್ನಬಹುದು. ಫ್ರಿಡ್ಜ್‍ನಲ್ಲಿ ಪಲಾವು, ಉಪ್ಪಿಟ್ಟು-ಕೇಸರಿಬಾತ್, ಬೇಳೆ ಬಾತ್, ವಾಂಗಿಬಾತ್, ಪೂರಿ, ಚಪಾತಿ ಸಾಗು, ಪಲ್ಯಗಳು, ಚಟ್ನಿ, ಸಾಂಬಾರು ಇತ್ಯಾದಿಗಳಿರುತ್ತವೆ. ಕೆಲವೊಮ್ಮೆ ಅನ್ನ-ಸಾಂಬಾರ್ ಕೂಡ ಇರಲಿದೆ.
ನಗರದ ಮುರುಗನ್ ಕೆಫೆ ಮತ್ತು ಮತ್ತಿತರ ಹೋಟೆಲ್‍ಗಳ ಮಾಲೀಕರನ್ನು ನಮ್ಮ ಯೋಜನೆಗೆ ಸಹಕರಿಸಲು ಕೋರಿದ್ದೇವೆ. ಅದಕ್ಕವರು ಒಪ್ಪಿಕೊಂಡಿದ್ದಾರೆ ಎಂದು ಫೌಂಡೇಶನ್ ಸದಸ್ಯರು ಮಾಹಿತಿ ನೀಡಿದರು. ಬರೀ ಊಟ ಮಾತ್ರವಲ್ಲದೆ,  ನಿಮ್ಮ ಮನೆಗಳಲ್ಲಿ ಉತ್ತಮ ಗುಣಮಟ್ಟದ ಆಹಾರ, ಆಟಿಕೆಗಳು, ಉಡುಪುಗಳು ಮತ್ತು ಪುಸ್ತಕಗಳು ಬಳಸದೆ ಇದ್ದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದಾಗ ವ್ಯರ್ಥ ಮಾಡದೆ ಇಲ್ಲಿಗೆ ತಂದಿಡಬಹುದು.
ಹಲಸೂರಿನ ಮೆಟ್ರೋ ರೈಲು ನಿಲ್ದಾಣದ ಬಳಿ ಇರುವ ಆಟ, ಪಾಠ, ಊಟ, ಕೂಟ ಸಮದಾಯಾಧಾರಿತ  ದಾಸ್ತಾನು ಕೇಂದ್ರಕ್ಕೆ ಉಡುಗೊರೆಯಾಗಿ ನೀಡಿ, ಕೈಜೋಡಿಸಬಹುದು. ನೀವು ನೀಡಿದ ವಸ್ತುಗಳ ಅಗತ್ಯವಿದ್ದವರು ಇಲ್ಲಿಂದು ಕೊಂಡೊಯ್ಯುತ್ತಾರೆ. ಅಂದ ಹಾಗೆ ನಿಮ್ಮಿಂದ ಉಡುಗೊರೆಯಾಗಿ ದಾನವನ್ನಷ್ಟೇ ಬಯಸುತ್ತಿಲ್ಲ.ಇಲ್ಲಿಂದ ನಿಮಗೆ ಅಗತ್ಯವಿರುವ ವಸ್ತುಗಳನ್ನೂ ನೀವೂ ಸಹ ಕೊಂಡೊಯ್ಯಬಹುದು. ಇಲ್ಲಿ, ಎಲ್ಲವೂ ಉಚಿತ ಎನ್ನುತ್ತಾರೆ ಯುವ ಚಿಂತನಾ ಫೌಂಡೇಶನ್ ಮುಖ್ಯಸ್ಥೆ ಅನುಪಮಾ.
ಕೇಂದ್ರಕ್ಕೆ ಮೆಚ್ಚುಗೆ
ಈ ನಡುವೆ ದಾಸ್ತಾನು ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಬಡವರು ಹಿಂದುಳಿದ ವರ್ಗದವರಿಗೆ ಅನುಕೂಲವಾಗುವಂತೆ ನಗರದಲ್ಲಿ ಆಹಾರ ವಸ್ತುಗಳ ದಾಸ್ತಾನು ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ಇಂತಹ ಸೇವೆಗಳಿಂದ ಬಡವರಿಗೆ ಅನುಕೂಲ ಆಗುತ್ತದೆ ಎಂದು ನುಡಿದರು. ದಾನ ಎನ್ನುವುದು ಅತ್ಯಂತ ಶ್ರೇಷ್ಠ. ಪ್ರತಿಯೊಬ್ಬರೂ ತಮ್ಮ ಬಳಿಯ ವಸ್ತುಗಳನ್ನು ದಾನ ಮಾಡಿದರೆ, ಬಡವರು ಸದುಪಯೋಗ ಪಡಿಸಿಕೊಳ್ಳುತ್ತಾರೆ.ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಗಳ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಫೌಂಡೇಶನ್ ಮುಖ್ಯಸ್ಥೆ ಅನುಪಮಾ ಮಾತನಾಡಿ, ಮುಂದಿನ ದಿನಗಳಲ್ಲಿ ಇದನ್ನು ಬಿಸಿ ಮಾಡಿಕೊಡುವ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚಿಂತಿಸಲಾಗುವುದು. ಸಾಮಾಜಿಕ ಜಾಲತಾಣದ ಮೂಲಕ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಆಸಕ್ತರು ಕೈ ಜೋಡಿಸಿದರೆ ಇನ್ನೂ ಹೆಚ್ಚಿನ ಮಂದಿಗೆ ನೆರವಾಗಬಹುದು. ಮನೆಗಳಲ್ಲಿ ಆಹಾರ ಉಳಿದವರೂ ತಂದಿಡಬಹುದು ಎಂದು ಮಾಹಿತಿ ನೀಡಿದರು.


ಸಂಬಂಧಿತ ಟ್ಯಾಗ್ಗಳು

Poor BBMP Poverty Food


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ