ಆರೋಪಿಯ ಹುಟ್ಟುಹಬ್ಬ ಆಚರಿಸಿದ ಪೊಲೀಸರು!

Police celebrates accused birth day at jail

01-08-2019

ಬೆಂಗಳೂರು: ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬನ ಹುಟ್ಟುಹಬ್ಬ ಆಚರಿಸಿದ ಇಬ್ಬರು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ಗಳ ಮೇಲೆ ಕ್ರಮ ಕೈಗೊಳ್ಳಲು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.
ಕಳೆದ 10 ತಿಂಗಳ ಹಿಂದೆ ಠಾಣೆಯಲ್ಲಿ ಪೊಲೀಸ್ ಭಾತ್ಮಿಧಾರನಾಗಿದ್ದ ವಿದ್ಯಾರಣ್ಯಪುರದ ಅಭಿಷೇಕ್(25) ಎಂಬಾತನ ಹುಟ್ಟುಹಬ್ಬವನ್ನು ಅಂದಿನ ಇಬ್ಬರು ಸಬ್‍ಇನ್ಸ್‍ಪೆಕ್ಟರ್‍ಗಳಾದ ರಾಖೇಶ್ ಹಾಗೂ ಕಲ್ಲೇಶ್ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಆಚರಣೆ ಮಾಡಲಾಗಿತ್ತು.
ಪೊಲೀಸರ ವಿಶ್ವಾಸಗಳಿಸಿದ್ದ ಅಭಿಷೇಕ್ ಅದೇ ಠಾಣೆಯ ಪೊಲೀಸ್ ಪೇದೆಯೊಬ್ಬರ ಗುರುತಿನ ಪತ್ರವನ್ನು ಕಳವು ಮಾಡಿ ಅದರಲ್ಲಿನ ಭಾವಚಿತ್ರವನ್ನು ತೆಗೆದು ತನ್ನ ಭಾವಚಿತ್ರವನ್ನು  ಹಾಕಿ ತಾನು ವಿದ್ಯಾರಣ್ಯಪುರ ಠಾಣೆಯ ಅಪರಾಧ ವಿಭಾಗದ ಕಾನ್ಸ್‍ಟೇಬಲ್ ಎಂದು ಹೇಳಿಕೊಂಡು ವಂಚನೆಯಲ್ಲಿ ತೊಡಗಿದ್ದ.
ಕಾರು ಮಾಲೀಕರೊಬ್ಬರಿಂದ 10 ಸಾವಿರ ಸುಲಿಗೆ ಮಾಡಿದ್ದ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾರಣ್ಯಪುರ ಪೊಲೀಸರು ಅಭಿಷೇಕ್‍ನನ್ನು ಕಳೆದ ಜು.12ರಂದು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ಇಬ್ಬರು ಸಬ್‍ಇನ್ಸ್‍ಪೆಕ್ಟರ್‍ಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಅದನ್ನು ನೋಡಿದ ಡಿಸಿಪಿ ಭೀಮಾಶಂಕರ ಗುಳೇದ್ ಅವರು  ಠಾಣೆಯಲ್ಲಿ ಇಲಾಖೆಗೆ ಸಂಬಂಧಿಸಿಲ್ಲದವರ ಹುಟ್ಟುಹಬ್ಬ ಆಚರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡಿರುವ ಇಬ್ಬರು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ಗಳ ಮೇಲೆ ಕ್ರಮಕ್ಕೆ ವರದಿ ಸಿದ್ಧಪಡಿಸಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಮೂಲಕ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಸಲ್ಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Arrest Birthday Alok Kumar Police commissioner


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ