3000 ಸಾವಿರ ಯೋಗಪಟುಗಳಿಂದ ಗಿನ್ನೀಸ್ ದಾಖಲೆಗೆ ವೇದಿಕೆ ಸಿದ್ಧತೆ !

Kannada News

12-06-2017

ಬೆಂಗಳೂರು:- ಮೂರನೇ ಅಂತರರಾಷ್ಟ್ರೀಯ ಯೋಗದಿನದ ಪ್ರಯುಕ್ತ ಎಸ್.ವ್ಯಾಸ, ಆರ್ಟ್ ಆಫ್ ಲಿವಿಂಗ್, ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ  ಸಹಭಾಗಿತ್ವದಲ್ಲಿ ಶಕ್ತಿ ಕೇಂದ್ರ ವಿಧಾನಸೌಧದ ಮುಂದೆ ೩೦೦೦ ಸಾವಿರ ಯೋಗಪಟುಗಳಿಂದ ೩೦ ಸೆಕೆಂಡ್‌ಗಳ ಕಾಲ ‘ಶೀರ್ಷಾಸನ’ವನ್ನು ಪ್ರದರ್ಶಿಸಿ ನೂತನ ವಿಶ್ವ ದಾಖಲೆ ನಿರ್ಮಿಸಲು ವೇದಿಕೆ ಸಿದ್ದವಾಗಿದೆ. ಅಂತರರಾಷ್ಟ್ರೀಯ ಯೋಗದಿನದ ಪೂರ್ವಭಾವಿ ಕಾರ್ಯಕ್ರಮವಾಗಿ ಜೂ ೧೮ ರಂದು ವಿಧಾನಸೌಧದ ಮುಂದೆ ಸುಮಾರು ೩೦೦೦ ಸಾವಿರ ಯೋಗಪಟುಗಳಿಂದ ೩೦ ಸೆಕೆಂಡ್‌ಗಳ ಕಾಲ ಯೋಗಾಸನಗಳಲ್ಲಿ ‘ಶೀರ್ಷಾಸನ’ವನ್ನು ಪ್ರದರ್ಶಿಸಿ, ಗಿನ್ನೀಸ್ ದಾಖಲೆಗೆ ಯೋಗಗಂಗೋತ್ರಿ ಸಂಸ್ಥೆಯ ನೇತೃತ್ವದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.  ಇದಕ್ಕಾಗಿ ನೂರಾರು ಯೋಗ ಕೇಂದ್ರಗಳಲ್ಲಿ ‘ಶೀರ್ಷಾಸನ’ ತರಬೇತಿ ಕಾರ್ಯ ಸುಮಾರು ಮೂರು ತಿಂಗಳ ಹಿಂದಿನಿಂದಲೇ ನಡೆಯುತ್ತಿದೆ.  ನೂರಾರು ಯೋಗಶಿಕ್ಷಕರನ್ನು ತರಬೇತಿ ಕಾರ್ಯದಲ್ಲಿ ನಿಯೋಜಿಸಲಾಗಿದೆ.  ೧೮ ವರ್ಷ ಮೇಲ್ಪಟ್ಟ ಪುರುಷ ಮಹಿಳೆಯರೆಲ್ಲರೂ ಭಾಗವಹಿಸಬಹುದಾದ ಈ ಕಾರ್ಯಕ್ರಮ ಯೋಗ ಪ್ರಚಾರ ಮತ್ತು ಆರೋಗ್ಯ ಪಾಲನೆಗೆ ‘ಯೋಗಾಸನ’ಗಳ ಮಹತ್ವವನ್ನು ಸಾರಿ ಹೇಳುವುದಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಯೋಗಗಂಗೋತ್ರಿ ಅಧ್ಯಕ್ಷ ಎನ್.ಆರಾಧ್ಯ ಹೇಳಿದ್ದಾರೆ. ಬೆಂಗಳೂರು ನಗರವಲ್ಲದೆ ರಾಜ್ಯದ ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣೆಗೆರೆ, ಹುಬ್ಬಳ್ಳಿ, ಸೇರಿ ಹಲವಾರು ನಗರಗಳಿಂದ ಯೋಗಪಟುಗಳು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ.  ಹೊರರಾಜ್ಯ ಆಂಧ್ರದಿಂದಲೂ ಯೋಗಪಟುಗಳು ಆಗಮಿಸಲಿದ್ದಾರೆ. ಪುರಭವನದಿಂದ ಬೆಳಿಗ್ಗೆ ೬.೩೦ಕ್ಕೆ “ಯೋಗಥಾನ್”, ಆರೋಗ್ಯದೆಡೆಗೆ ಯೋಗ ನಡಿಗೆಯಿಂದ ಪ್ರಾರಂಭವಾಗುವ ಕಾರ್ಯಕ್ರಮ ಸುಮಾರು ೭.೩೦ಕ್ಕೆ ವಿಧಾನಸೌಧದ ಪೂರ್ವಭಾಗದಲ್ಲಿ ಸೇರಲಿದೆ. ವಿಶಾಲವಾದ ವೇದಿಕೆಯಲ್ಲಿ, ೩೦೦೦ ಸಾವಿರ ಯೋಗಪಟುಗಳಿಗೆ ಶೀರ್ಷಾಸನ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.  ೧೦೮ ಜನರ ತಂಡ ಸಂಗೀತದ ಜೊತೆ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ, ನಂತರ ಯೋಗಪಟುಗಳು ಶೀರ್ಷಾಸನ ಪ್ರದರ್ಶಿಸಿ ವಿಶ್ವದಾಖಲೆ ನಿರ್ಮಿಸಲಿದ್ದಾರೆ ಮತ್ತು ವಿವಿಧ ಯೋಗಗುಚ್ಛಗಳನ್ನು ಪ್ರದರ್ಶಿಸಲಾಗುತ್ತದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ