ಸಂಪುಟ ಸೇರಲು ತೀವ್ರ ಪೈಪೋಟಿ

Karnataka Government

30-07-2019

ಬೆಂಗಳೂರು: ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ತೀವ್ರಗೊಂಡಿದ್ದು, 33 ಸ್ಥಾನಕ್ಕೆ 60 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಶಾಸಕರನ್ನು ಸಂತೈಸುವುದು ಬಿಜೆಪಿ ನಾಯಕರಿಗೆ ಹಾಗೂ ಸಿಎಂ ಯಡಿಯೂರಪ್ಪಗೆ ದೊಡ್ಡ ಸವಾಲಿನ ಕೆಲಸವಾಗಿದೆ.
ಕಾಂಗ್ರೆಸ್ ಮತ್ತು ಜೆಡಿ ಎಸ್ ನ ಅತೃಪ್ತ ಶಾಸಕರಿಗೆ ರಾಜೀನಾಮೆ ನೀಡುವ ಮೊದಲು ಮಂತ್ರಿಗಿರಿ ನೀಡುವುದಾಗಿ ಹೇಳಿತ್ತು ಎನ್ನಲಾಗುತ್ತಿದೆ. ಒಂದು ವೇಳೆ ರಾಜೀನಾಮೆ ಅಂಗೀಕಾರವಾಗಿದ್ದರೆ ಮಂತ್ರಿ ಸ್ಥಾನ ನೀಡಿ ಚುನಾವಣೆಗೆ ಹೋಗುವ ಪ್ಲಾನ್ ಬಿಜೆಪಿಗಿತ್ತು. ಆದರೆ ಈಗ ಶಾಸಕರನ್ನು ಅನರ್ಹ ಮಾಡಿದ್ದರಿಂದ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ.ಇದರಿಂದಾಗಿ ಬಿಜೆಪಿಯಲ್ಲೇ ತೀವ್ರ ಪೈಪೋಟಿ ಆರಂಭವಾಗಿದೆ.

ಹಿರಿಯ ಶಾಸಕರಿಂದ ಹಿಡಿದು ಮೊದಲ ಬಾರಿ ಗೆದ್ದ ಶಾಸಕರೂ ಸಚಿವಗಿರಿಗಾಗಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದಲೇ 6 ಜನ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾದವರು ಹಾಗೂ ಮಂತ್ರಿ ಪದವಿ ಸಿಗದೇ ವಂಚಿತರಾದವರು, ತಮ್ಮ ತಮ್ಮ ಗಾಡ್ ಫಾದರ್ ನಾಯಕರ ಮೂಲಕ ಒತ್ತಡ ಹಾಕುತ್ತಿದ್ದಾರೆ.

ಒಂದೊಂದು ಜಿಲ್ಲೆಯಿಂದ ಮೂರರಿಂದ ಐದು ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ಬಳಿ ಲಾಬಿ ಮಾಡುತ್ತಿದ್ದಾರೆ. ಬಿಜೆಪಿ, ರಾಜ್ಯದಲ್ಲಿ 105 ಶಾಸಕರನ್ನು ಹೊಂದಿದ್ದು. ಶೇಕಡಾ 50 ಕ್ಕಿಂತಲೂ ಹೆಚ್ಚು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಯಾರು ಸಚಿವರಾಗಬೇಕೆನ್ನುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ಚರ್ಚಿಸಿ ಬಿಜೆಪಿ ಹೈಕಮಾಂಡ್ ಅವರೇ ನಿರ್ಧಾರ ಮಾಡುವುದರಿಂದ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡು ಭಿನ್ನಮತೀಯ ಚಟುವಟಿಕೆ ನಡೆಸಿದರೆ ಅಂಥವರ ವಿರುದ್ದ ಶಿಸ್ತುಕ್ರಮ ತಗೆದುಕೊಳ್ಳುವ ಸಾಧ್ಯತೆಯ ಸಂದೇಶವನ್ನೂ ಪಕ್ಷ ಈಗಾಗಲೇ ಆಕಾಂಕ್ಷಿಗಳಿಗೆ ನೀಡಿದೆ.
ಕಾನೂನು ಪ್ರಕಾರ ಸಿಎಂ ಸೇರಿ ಗರಿಷ್ಟ ಒಟ್ಟು 34 ಮಂದಿಗಷ್ಟೇ ಮಂತ್ರಿಯಾಗಲು ಸಾಧ್ಯ. ಸದ್ಯ ಅನರ್ಹಗೊಂಡಿರುವ ಶಾಸಕರನ್ನು ಹೊರತುಪಡಿಸಿ ಕೇವಲ 23 ಶಾಸಕರನ್ನು ಒಳಗೊಂಡ ಸಚಿವ ಸಂಪುಟ ರಚನೆ ಮಾಡುವುದು. 11 ಮಂತ್ರಿ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, 6 ತಿಂಗಳ ಬಳಿಕ ಸಂಪುಟ ವಿಸ್ತರಣೆ ಮಾಡುವ ರಾಜಕೀಯ ಲೆಕ್ಕಾಚಾರ ಮಾಡಿದ್ದಾರೆಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa Minister BJP Cabinet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ