ರಾಜಧಾನಿಯಲ್ಲಿ ಕುಖ್ಯಾತ ಕಳ್ಳರ ಬಂಧನ

CCB police arrested Rowdy Narayana

29-07-2019

ಬೆಂಗಳೂರು: ಅಪರಾಧ ಕೃತ್ಯವೊಂದರ ಸಂಬಂಧ ಕುಖ್ಯಾತ ರೌಡಿ ಜೆಸಿಬಿ ನಾರಾಯಣನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿಯ ರೌಡಿ ಜೆಸಿಬಿ ನಾರಾಯಣನನ್ನು ಸೋಮವಾರ ಮುಂಜಾನೆ ಬಂಧಿಸಿರುವ ಎಲೆಕ್ಟ್ರಾನಿಕ್‍ಸಿಟಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. 5 ಕೊಲೆ, 2 ಕೊಲೆಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ ಸೇರಿದಂತೆ, 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಜೆಸಿಬಿ ನಾರಾಯಣನನ್ನು ಅಪರಾಧ ಪ್ರಕರಣವೊಂದರ ಸಂಬಂಧ ಬಂಧಿಸಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಸಿಸಿಬಿ ಪೊಲೀಸರು, ಜೆಸಿಬಿ ನಾರಾಯಣನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಆತ, ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗಿದ್ದ ಎಂದು ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಜೆಸಿಬಿ ನಾರಾಯಣ ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದು, ಈತನ ವಿರುದ್ಧ ಮಡಿವಾಳ, ಮೈಕೋ ಲೇಔಟ್, ಕೋರಮಂಗಲ ಪೊಲೀಸ್ ಠಾಣೆಗಳ ರೌಡಿ ಪಟ್ಟಿಗೆ ಸೇರಿಸಲಾಗಿದೆ.

ಬಡವರ ನಿವೇಶನಗಳಿಗೆ ರಾತ್ರೋರಾತ್ರಿ ಬೇಲಿಹಾಕಿ ಸುಲಿಗೆ ಮಾಡುತ್ತಿದ್ದ ನಾರಾಯಣನ ಮೇಲೆ ತಮಿಳುನಾಡಿನಲ್ಲೂ ಸರಗಳವು, ಸುಲಿಗೆ ಪ್ರಕರಣಗಳು ದಾಖಲಾಗಿವೆ.

ರೌಡಿ ತುರೆ ಬಂಧನ

ಬಸವೇಶ್ವರನಗರದ ಬಳಿ ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ರೌಡಿ ಚೇತನ ಅಲಿಯಾಸ್ ತುರೆ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮಾಕ್ಷಿಪಾಳ್ಯದ ಚೇತನ್ ಕುಮಾರ್ ಅಲಿಯಾಸ್ ತುರೆ (34),ಆತನ ಸಹಚರ ಮೀನಾಕ್ಷಿ ನಗರದ ರಾಹುಲ್ (20) ಬಂಧಿಸಿ ಸಂಚಿನಲ್ಲಿ ಭಾಗಿಯಾಗಿ ಪರಾರಿಯಾಗಿರುವ ಲಗ್ಗೆರೆಯ ಸತೀಶ, ಕಾಮಾಕ್ಷಿ ಪಾಲ್ಯದ ಭಾರ್ಗವ ಹಾಗೂ ಕಿಶೋರ್‍ಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಆರೋಪಿಗಳು ಸಾಣೆಗೊರವನಹಳ್ಳಿಯ ನೇತಾಜಿ ಪಾರ್ಕ್ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗ ಕಾರ್ಯಾಚರಣೆ ಕೈಗೊಂಡ ಪೊಲೀಸರು, ತುರೆ ಹಾಗೂ ರಾಹುಲ್‍ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಬಂಧಿತ ರೌಡಿ ತುರೆ 1 ಕೊಲೆ, 4 ಕೊಲೆಯತ್ನ, ದರೋಡೆ ಸೇರಿದಂತೆ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿಯಿಂದ ಮಚ್ಚು, ಲಾಂಗು ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Bengaluru Theft Rowdy CCB


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ