2020 ರಲ್ಲಿ ಮಧ್ಯಂತರ ಚುನಾವಣೆ..?

Karnataka Government crisis

29-07-2019

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ತನಗಿರುವ ಬಹುಮತವನ್ನು ಸಾಬೀತುಪಡಿಸುತ್ತಿದ್ದಂತೆಯೇ ಮಧ್ಯಂತರ ಚುನಾವಣೆಯ ಜಪ ಆರಂಭವಾಗಿದ್ದು 2020 ರಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂದು ಹಲ ನಾಯಕರು ಅಭಿಪ್ರಾಯಿಸಿದ್ದಾರೆ.

ವಿಧಾನಸಭೆಯ ಮೊಗಸಾಲೆಯಲ್ಲಿಂದು ಕಲಾಪವನ್ನು ವೀಕ್ಷಿಸುತ್ತಾ ಕುಳಿತಿದ್ದ ಹಲವು ನಾಯಕರು ಯಡಿಯೂರಪ್ಪ ತಮ್ಮ ಸರ್ಕಾರಕ್ಕಿದ್ದ ಬಹುಮತವನ್ನು ಸಾಬೀತುಪಡಿಸುತ್ತಿದ್ದಂತೆಯೇ ಅನೌಪಚಾರಿಕವಾಗಿ ಮಾತನಾಡತೊಡಗಿದ ಅವರು, ಮುಂದಿನ ವರ್ಷ ಮಧ್ಯಂತರ ಚುನಾವಣೆ ಖಚಿತ ಎಂದರು.

ಸರ್ಕಾರ ಸುಧೀರ್ಘ ಕಾಲ ಮುಂದುವರಿದರೆ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಮೇಲೇಳುತ್ತದೆ. ಅದಕ್ಕೂ ಮುನ್ನವೇ ಮಧ್ಯಂತರ ಚುನಾವಣೆ ನಡೆಸುವುದು, ಬಹುಮತ ಪಡೆಯುವುದು ಬಿಜೆಪಿ ಹೈಕಮಾಂಡ್ ವರಿಷ್ಟರ ಲೆಕ್ಕಾಚಾರ ಎಂಬುದು ಅವರ ಮಾತಾಗಿತ್ತು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ತಮ್ಮ ಸುತ್ತ ಯಾರನ್ನು ಸೇರಿಸಿಕೊಳ್ಳುತ್ತಾರೆ ಎಂಬುದು ಮಧ್ಯಂತರ ಚುನಾವಣೆಯ ಸಾಧ್ಯತೆಯನ್ನು ಹೆಚ್ಚೆಚ್ಚು ಹತ್ತಿರವಾಗಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಒಂದು ವೇಳೆ ಯಡಿಯೂರಪ್ಪ ಅವರು ತಮ್ಮ ಆಪ್ತರ ಪಡೆಯನ್ನು,ಜಾತಿಯ ಅಧಿಕಾರಿಗಳನ್ನು ಹೆಚ್ಚೆಚ್ಚು ಹತ್ತಿರ ಸೇರಿಸಿಕೊಂಡರೆ ಈ ಸರ್ಕಾರ ಆರು ತಿಂಗಳಿಗಿಂತ ಹೆಚ್ಚು  ಕಾಲ ಬಾಳಲು ಸಾಧ್ಯವಿಲ್ಲ.

ಒಂದು ವೇಳೆ ಅವರು ಆಡಳಿತವನ್ನು ಹೆಚ್ಚು ಪಾರದರ್ಶಕವನ್ನಾಗಿ ಮಾಡಿದರೆ ಕೆಲ ಕಾಲ ಮಧ್ಯಂತರ ಚುನಾವಣೆಯನ್ನು ಇನ್ನಷ್ಟು ಕಾಲ ಮುಂದೂಡಲು ಹೈಕಮಾಂಡ್ ನಿರ್ಧರಿಸಬಹುದು.

ಆದರೆ ಏನೇ ಆದರೂ 2020 ರಲ್ಲಿ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಆದರೆ ಮಧ್ಯಂತರ ಚುನಾವಣೆ ನಡೆದರೂ ಫಲಿತಾಂಶ ಈಗಿನದಕ್ಕಿಂತ ಭಿನ್ನವಾಗಿ ಬರುತ್ತದೆ ಎಂದು ಹೇಳುವುದು ಕಷ್ಟ. ಅದು ಕೂಡಾ ಸನ್ನಿವೇಶವನ್ನು ಅವಲಂಬಿಸಿದೆ. ಯಥಾ ಪ್ರಕಾರ ಅದು ಕೂಡಾ ಯಡಿಯೂರಪ್ಪ ಅವರ ಸರ್ಕಾರ ಹೇಗೆ ನಡೆಯುತ್ತದೆ? ಎಂಬುದರ ಆಧಾರದ ಮೇಲೆ ನಿಂತಿದೆಯೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ.

 

ಆದರೆ ಏನೇ ಮಾಡಿದರೂ ಬಿಜೆಪಿ ಮಾತ್ರ ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಮಧ್ಯಂತರ ಚುನಾವಣೆಗೆ ಹೋಗಬೇಕು. ಒಂದು ವೇಳೆ ಈ ಕೆಲಸವಾಗದೆ ಹೋದರೆ ಬಿಜೆಪಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತದೆ ಎಂದವರು ಅಭಿಪ್ರಾಯಿಸಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Election BJP Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ