ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ ರಮೇಶ್ ಕುಮಾರ್

Ramesh kumar resigned

29-07-2019

ಬೆಂಗಳೂರು: ಸಮ್ಮಿಶ್ರ ಸರ್ಕಾರ ಡೋಲಾಯಮಾನಗೊಂಡ ನಂತರ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆ ಮೂಲಕ ಯಡಿಯೂರಪ್ಪ ನೇತೃತ್ವದ ಸರ್ಕಾರ ಹೊಸ ಸ್ಪೀಕರ್ ಆಯ್ಕೆಗೆ ಅಗತ್ಯವಾದ ಕಸರತ್ತುಗಳನ್ನು ಪ್ರಾರಂಭಿಸಲು ಅವಕಾಶ ಸಿಕ್ಕಿದಂತೆ ಆಗಿದೆ. ಅಂದ ಹಾಗೆ ಇಂದು ಯಡಿಯೂರಪ್ಪ ಅವರು ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸಿದ ನಂತರ ಧನವಿನಿಯೋಗ ಮಸೂದೆಗೆ ಮತ್ತು ಪೂರಕ ಅಂದಾಜುಗಳ ಪಟ್ಟಿಗೆ ಅಂಗೀಕಾರ ಪಡೆದ ನಂತರ ರಮೇಶ್ ಕುಮಾರ್ ತಮ್ಮ ನಿರ್ಧಾರ ಪ್ರಕಟಿಸಿದರು.

ನಾನೊಬ್ಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ. ಲಾಠಿ ಚಾರ್ಜ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರನ್ನು ನೋಡುವ ಅವಕಾಶ ಸಿಕ್ಕಿತು. ಅವತ್ತು ಅವರ ಪ್ರಭಾವಕ್ಕೆ ಸಿಕ್ಕವನು ಬಿಡಿಸಿಕೊಳ್ಳಲಾಗಲಿಲ್ಲ ಎಂದವರು ಹೇಳಿದರು.

ನನ್ನ ಬಗ್ಗೆ ನನ್ನಣ್ಣ ಹಾಗೂ ನನ್ನತ್ತಿಗೆಗೆ ಇದ್ದ ಕನಸೇ ಬೇರೆ. ನಾನು ಆಗಿದ್ದೇ ಬೇರೆ. ಆದರೆ ಇವತ್ತು ಏನಾಗಿದ್ದೇನೋ ಅದರ ಬಗ್ಗೆ ನನಗೆ ತೃಪ್ತಿಯಿದೆ ಎಂದ ಅವರು, ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಕಿವಿ ಮಾತು ಹೇಳಿದರು.

ಯಡಿಯೂರಪ್ಪನವರೇ ನೀವು ಮುಖ್ಯಮಂತ್ರಿಯಾದ ಕೂಡಲೇ ಬಲಾಢ್ಯರು ನಿಮ್ಮ ಅಕ್ಕ ಪಕ್ಕ ಸೇರಿಕೊಂಡು ಬಿಡುತ್ತಾರೆ. ಅವರೇನೂ ನಿಮ್ಮ ಅಭಿಮಾನಿಗಳಲ್ಲ. ಬದಲಿಗೆ ಮುಖ್ಯಮಂತ್ರಿ ಹುದ್ದೆಯ ಅಭಿಮಾನಿಗಳು. ಯಾರೇ ಮುಖ್ಯಮಂತ್ರಿಯಾದರೂ ಅವರ ನಿಷ್ಟೆ ಆ ಹುದ್ದೆಯ ಮೇಲಿರುತ್ತದೆ.

ಆದರೆ ಅಂತವರನ್ನು ನಿಮ್ಮ ಅಕ್ಕ ಪಕ್ಕ ಸೇರಿಸಿಕೊಂಡರೆ ಆಡಳಿತ ಹದಗೆಡುತ್ತದೆ. ಹೀಗಾಗಿ ಇಂತಹ ಬಲಾಢ್ಯರನ್ನು ಸೇರಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಬಡವರು, ದಿಕ್ಕಿಲ್ಲದವರು, ಧ್ವನಿಯಿಲ್ಲದವರ, ದುರ್ಬಲರ ಕಡೆ ನೋಡಿ ಎಂದು ಹೇಳಿದರು. ಸಭಾಧ್ಯಕ್ಷ ಹುದ್ದೆಗೆ ಬಂದು ಕುಳಿತು  ಹದಿನಾಲ್ಕು ತಿಂಗಳು, ನಾಲ್ಕು ದಿನಗಳಾದವು. ಈ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಅವರು ಸಮಾಧಾನ ಪಟ್ಟುಕೊಂಡರು.

ಈ ಜಾಗದಲ್ಲಿ ಕುಳಿತು ನಾನು ಕೈಗೊಂಡ ನಿರ್ಣಯಗಳು  ಹಲ ಬಾರಿ ಇಲ್ಲಿರುವವರಿಗೆ ಕಟುವಾಗಿ ಕಂಡಿರಬಹುದು. ಆದರೂ ಅದನ್ನು ನಾನು ನಾಡಿನ ಹಿತದೃಷ್ಟಿಯಿಂದಾಗಿ ತೆಗೆದುಕೊಂಡಿದ್ದೇನೆ. ಹೀಗಾಗಿ ನನ್ನ ಕರ್ತವ್ಯ ನಿರ್ವಹಣೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದರು.

ಹದಿನೇಳು ಮಂದಿ ಶಾಸಕರನ್ನು ನಾನು ಪಕ್ಷಾಂತರ ನಿಷೇಧ ಕಾಯ್ದೆಯಡಿ ನಾನು ಅನರ್ಹಗೊಳಿಸಿದ್ದೇನೆ. ಇದನ್ನು ಐತಿಹಾಸಿಕ ನಿರ್ಧಾರ ಎಂದು ಹಲವರು ಬಣ್ಣಿಸಿದ್ದಾರೆ. ಹಲವರು ಟೀಕಿಸಿದ್ದಾರೆ. ನಾನು ಹೊಗಳಿಕೆಯಿಂದ ಉಬ್ಬುವುದಿಲ್ಲ. ತೆಗಳಿಕೆಯಿಂದ ಕುಗ್ಗುವುದಿಲ್ಲ ಎಂದು ಹೇಳಿದರು.

ತದ ನಂತರ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ನುಡಿದ ಅವರು ಸದನದಲ್ಲೇ ಇದ್ದ ಉಪಸಭಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.ಆನಂತರ ಉಪಸಭಾಧ್ಯಕ್ಷರಿಗೆ ತಮ್ಮ ಖುರ್ಚಿಯನ್ನು ಬಿಟ್ಟುಕೊಟ್ಟು ಕಲಾಪದಿಂದ ಹೊರಗೆ ನಡೆದರು.


ಸಂಬಂಧಿತ ಟ್ಯಾಗ್ಗಳು

Ramesh Kumar BS Yediyurappa Speaker Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ