ಸದನದಲ್ಲಿ ವಿಶ್ವಾಸ ಗೆದ್ದ ಯಡಿಯೂರಪ್ಪ

Yediyurappa won Trust Vote at session

29-07-2019

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸಮತಯಾಚನಾ ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ದೊರೆತಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವ ಕ್ಕೆ ಬಂದಂತಾಗಿದೆ.

ಬೆಳಗ್ಗೆ ವಂದೇಮಾತರಂನೊಂದಿಗೆ ಸದನ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶ್ವಾಸಮತಯಾಚನಾ ನಿರ್ಣಯ ಮಂಡಿಸಲು ಅವಕಾಶ ನೀಡಿದರು.
ಆಗ ಎದ್ದು ನಿಂತ ಸಿಎಂ ಈ ಸದನವು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ನಿರ್ಣಯವನ್ನು ಮಂಡಿಸಿದರು.

ವಿಶ್ವಾಸಮತ ನಿರ್ಣಯ ಮಂಡಿಸಿ ಮಾತನಾಡಿದ ಅವರು, ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಗೆ ನಮಿಸಿ ಬಸವಾಧಿ ಶರಣರು, ರಾಷ್ಟ್ರಪಿತ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರಿಗೆ ವಂದಿಸುತ್ತೇನೆ. ನಾಡಿನ ಜನರ ಆಶಯದಂತೆ ಮತ್ತೊಮ್ಮೆ ತಾವು ಮುಖ್ಯಮಂತ್ರಿಯಾಗಲು ದೊರೆತ ಅವಕಾಶ ನಾಡಿನ ಜನರಿಗೆ ತಂದ ಗೌರವವಾಗಿದೆ ಎಂದು ಹೇಳಿದರು.
ತಾವು ಮುಖ್ಯಮಂತ್ರಿಯಾಗಲು ಹಲವು ಕಾರಣಗಳಿದ್ದರೂ ಅದನ್ನು ಈ ಸಂದರ್ಭದಲ್ಲಿ ವಿಶ್ಲೇಷಿಸುವುದಿಲ್ಲ. ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್‍ಶಾ, ಜೆ.ಪಿ.ನಡ್ಡಾ ಅವರಿಗೆ ಅಭಿನಂದಿಸುವುದಾಗಿ ಹೇಳಿದಾಗ. ಆಡಳಿತ ಪಕ್ಷದ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರು.

ರಾಜ್ಯವೇ ಸಂದಿಗ್ಧ ಪರಿಸ್ಥಿತಿಯಲ್ಲಿದೆ ಜುಲೈ 31 ಕಳೆದರೆ ಸರ್ಕಾರದ ಹಣ ಖರ್ಚು ಮಾಡಲಾಗುವುದಿಲ್ಲ. ಹೀಗಾಗಿ ರಾಜ್ಯಪಾಲರು ಅತಿ ದೊಡ್ಡ ಪಕ್ಷವಾದ ಬಿಜೆಪಿಗೆ ಆಹ್ವಾನ ನೀಡಿದರು. ಕಳೆದ ಶುಕ್ರವಾರ ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದಾಗಿ ತಿಳಿಸಿದರು.

ರಾಜ್ಯದ 82 ತಾಲ್ಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಭೀಕರ ಬರಗಾಲವಿದೆ. ನಾವು ನೀವು ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸೋಣ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕಂತಿನಲ್ಲಿ ರೈತರಿಗೆ ಆರುಸಾವಿರ ನೆರವು ನೀಡುವ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ನಾವೂ ಕೂಡ ರಾಜ್ಯದಿಂದ ಎರಡು ಕಂತಿನಲ್ಲಿ ನಾಲ್ಕು ಸಾವಿರ ರೂ. ನೀಡಲು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ನೂರು ಕೋಟಿ ನೇಕಾರರ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದರು.
ರೈತರು, ನೇಕಾರರು ಎರಡು ಕಣ್ಣಿದಂತೆ ಎಂದ ಬಿಎಸ್‍ವೈ, ಮತದಾರರು ಮಾಲೀಕರಾಗಿದ್ದು, ಅವರ ಸೇವೆ ಮಾಡಲಾಗುವುದು. ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ ಆಡಳಿತ ನಡೆಸಲಿದ್ದು, ಪ್ರತಿಪಕ್ಷದವರ ಸಹಕಾರ ಬಯಸುವುದಾಗಿ ಹೇಳಿದರು.
ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸೇಡಿನ ರಾಜಕಾರಣ ಮಾಡಿಲ್ಲ. ವಿರೋಧ ಪಕ್ಷವಾಗಿ ಸರ್ಕಾರವನ್ನು ಟೀಕೆ ಟಿಪ್ಪಣಿ ಮಾಡುವುದು ಸಹಜ. ಮುಂದಿನ ನಾಲ್ಕೈದು ತಿಂಗಳಲ್ಲಿ ಸರ್ಕಾರ ಜನಪರವಾಗಿ ಅಭಿವೃದ್ಧಿಯ ಗುರಿಯೊಂದಿಗೆ ಆಡಳಿತ ನಡೆಸಲಿದೆ. ಪ್ರಸ್ತುತ ಆಡಳಿತ ಯಂತ್ರ ಕುಸಿದಿದ್ದು, ಇದನ್ನು ಸರಿದಾರಿಗೆ ತರುವುದು ನಮ್ಮ ಮೊದಲ ಆದ್ಯತೆ. ತಾವು ಕೂಡ ದ್ವೇಷದ ರಾಜಕಾರಣ ಮಾಡುವುದಿಲ್ಲ. ಫಾರ್‍ಗೆಟ್ ಫಾರ್ ಗೀವ್‍ನಲ್ಲಿ ನಂಬಿಕೆ ಇದೆ ಎಂದರು.

ನಿರ್ಣಯದ ಮೇಲೆ ಅಲ್ಪಕಾಲ ಚರ್ಚೆ ನಡೆದ ನಂತರ ಚರ್ಚೆಗೆ ಉತ್ತರ ನೀಡಿದ ಯಡಿಯೂರಪ್ಪನವರು ನಾಡಿನ ಕಲ್ಯಾಣಕ್ಕೆ ಶಕ್ತಿ ಮೀರಿ ಕೆಲಸ ಮಾಡವು ಭರವಸೆ ನೀಡಿ, ತಾವು ಮಂಡಿಸಿದ ವಿಶ್ವಾಸಮತ ಯಾಚನಾ ಪ್ರಸ್ತಾವವನ್ನು ಅಂಗೀಕರಿಸಬೇಕೆಂದು ಕೊರಲಾಯಿತು.

ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು. ಈ ಸಂದರ್ಭದಲ್ಲಿ ಯಾರೂ ಕೂಡ ವಿರೋಧ ವ್ಯಕ್ತಪಡಿಸಲಿಲ್ಲ. ನಂತರ ಸಭಾಧ್ಯಕ್ಷರು ಧ್ವನಿಮತದ ಅಂಗೀಕಾರಕ್ಕೆ ಒಪ್ಪಿಗೆ ಇದೆಯೇ ಎಂದು ಪ್ರಶ್ನಿಸಿದರು. ಈ ವೇಳೆ ಸದನದಲ್ಲಿ ಬಿಜೆಪಿಯ ಎಲ್ಲಾ 105 ಶಾಸಕರು ಸದನದಲ್ಲಿ ಹಾಜರಿದ್ದು, ಸರ್ಕಾರದ ಪರ ಧ್ವನಿ ಮೊಳಗಿಸಿದರು. ಇದರೊಂದಿಗೆ ಯಡಿಯೂರಪ್ಪ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಿತು.

 


ಸಂಬಂಧಿತ ಟ್ಯಾಗ್ಗಳು

BS Yediyurappa BJP Session Trust Vote


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ