ಸಚಿವ ಸ್ಥಾನಕ್ಕಾಗಿ ನಡೆದಿದೆ ಲಾಭಿ

Umesh Katti

27-07-2019

ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚಿಸಿದ್ದು ಬಿಜೆಪಿ ನಾಯಕರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸುತ್ತುವರೆದಿರುವ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ಆರಂಭಿಸಿದ್ದಾರೆ.

ಡಾಲರ್ಸ್ ಕಾಲೋನಿಯ ಧವಳಗಿರಿಯಲ್ಲಿ ಚಟುವಟಿಕೆಗಳು ಗರಿಗೆದರಿದವು. ಬಿಜೆಪಿ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಆಗಮಿಸಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಪಕ್ಷದ ಕಚೇರಿಯಲ್ಲೂ ಹಬ್ಬದ ವಾತಾವರಣ ಕಂಡು ಬಂತು. ಪಕ್ಷದ ಕಚೇರಿಯಲ್ಲೂ ಯಡಿಯೂರಪ್ಪ ಅವರಿಗೆ ಕಾರ್ಯಕರ್ತರು, ಮುಖಂಡರು ಅಭಿನಂದನೆ ಸಲ್ಲಿಸಿದರು.

ಯಡಿಯೂರಪ್ಪ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ, ಶಾಸಕ ಉಮೇಶ್ ಕತ್ತಿ, ತಾವೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ಆದರೆ ನಮ್ಮದು ಹೊಸದಾಗಿ ಸರ್ಕಾರ ರಚನೆಯಾಗುತ್ತಿದ್ದು, ಉತ್ತಮ ಆಡಳಿತ ನೀಡುವುದು ನಮ್ಮ ಮೊದಲ ಗುರಿಯಾಗಿದೆ. ನಮಗೆ ಅಧಿಕಾರಕ್ಕಿಂತ ರಾಜ್ಯದ ಅಭಿವೃದ್ಧಿ ಮುಖ್ಯ. ತಾವು ಮೊದಲಿಂದಲೂ ಅಧಿಕಾರ ತ್ಯಾಗ ಮಾಡುತ್ತಲೇ ಬಂದಿದ್ದು, ಪಕ್ಷ ಮತ್ತು ಸರ್ಕಾರಕ್ಕಾಗಿ ಹೊರಗಿನಿಂದ ಬಂದವರಿಗೆ ಸೂಕ್ತ ಸ್ಥಾನ‌ ನೀಡಲು ಪಕ್ಷ ಸಿದ್ಧವಾಗಿದೆ. ಪಕ್ಷಕ್ಕೆ ರಮೇಶ್ ಜಾರಕಿಹೊಳಿ ಬಂದರೂ ಸ್ವಾಗತ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕಾಂಗ ನಾಯಕ ಸಿದ್ದರಾಮಯ್ಯ ಬಂದರೂ ಸ್ವಾಗತ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ , ಸೋಮವಾರ ಅಥವಾ ಮಂಗಳವಾರ ವಿಶ್ವಾಸಮತ ಸಾಬೀತಿಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಬಳಿಕವೇ ಸಚಿವ ಸಂಪುಟ ರಚನೆಯಾಗಲಿದೆ. ಪಕ್ಷದ ಹೈಕಮಾಂಡ್ ಜೊತೆ ರಾಜ್ಯ ನಾಯಕರು ಚರ್ಚಿಸಿ ಸಚಿವ ಸಂಪುಟಕ್ಕೆ ಯಾರು ಸೇರ್ಪಡೆಯಾಗುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ. ಸಚಿವ ಸ್ಥಾನ ಯಾರಿಗೆ ಸಿಗುತ್ತದೆಯೋ ಬಿಡುತ್ತದೆಯೋ ತಮಗೆ ಗೊತ್ತಿಲ್ಲ‌. ಆದರೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ನಾಯಕರ ಮಾತಿಗೆ ಸಮ್ಮತಿ ಸೂಚಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ, ಸ್ಥಿರ ಸರ್ಕಾರ ನೀಡಲು ನಾವೆಲ್ಲರೂ ಸಹಕರಿಸುತ್ತೇವೆ‌ ಎಂದರು.

ಶಾಸಕ‌ ಅಭಯ ಪಾಟೀಲ್ ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಆದರೆ ಬೆಳಗಾವಿ ಜಿಲ್ಲಾ ಅಭಿವೃದ್ಧಿ, ನೇಕಾರರ ಸಮಸ್ಯೆ ಬಗೆಹರಿದರೆ ಸಾಕು. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎನ್ನುವ ಮೂಲಕ ಸಚಿವ ಪರೋಕ್ಷವಾಗಿ ಸಚಿವ ಸ್ಥಾನದ ಬೇಡಿಕೆ ಇಟ್ಟರು.

ಸಿ.ಸಿ‌. ಪಾಟೀಲ್ ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಮ್ಮ ಜಿಲ್ಲೆಯಿಂದ ಸಚಿವ ಸ್ಥಾನಕ್ಕೆ ಬೇಡಿಕೆಯನ್ನು ಇಟ್ಟಿಲ್ಲ. ಆದರೆ ನಮ್ಮ ಜಿಲ್ಲೆಯಲ್ಲಿ‌ ಸಾಕಷ್ಟು ನೀರಾವರಿ ಕಾಮಗಾರಿಗಳು ಬಾಕಿ ಉಳಿದುಕೊಂಡಿದ್ದು, ಅದಕ್ಕೆ ಆದ್ಯತೆ ನೀಡಲಾಗುವುದು. ಮೈತ್ರಿ ಸರ್ಕಾರದ ಅವಧಿಯಲ್ಲಿ ಗದಗ ಜಿಲ್ಲೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಚಾಲನೆ ಸಿಗಲಿದೆ, ಅತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಪಕ್ಷದ ವರಿಷ್ಟರು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಅನುಮತಿ‌ ನೀಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಸುಭ್ರದ್ರ ,ಜನಪರ , ಅಭಿವೃದ್ಧಿ ಪರ ಆಡಳಿತ ನೀಡುತ್ತದೆ ಎಂಬ ಭರವಸೆ ನೀಡುತ್ತಿದ್ದೇವೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆಪರೇಷನ್ ಕಮಲದ ರೂವಾರಿ ಸಿ ಪಿ ಯೋಗೀಶ್ವರ್, ಯಡಿಯೂರಪ್ಪ ಅವರು ನಾಲ್ಕನೆ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವುದು ಅಂತ್ಯಂತ ಸಂತೋಷ ತಂದಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗಾಗಲಿ ಮೈತ್ರಿ ಸರ್ಕಾರ ಪತನಕ್ಕಾಗಲಿ ತಾವು ಕಾರಣ ಅಲ್ಲ. ಕಾಂಗ್ರೆಸ್-ಜೆಡಿಎಸ್ ಒಳಜಗಳದಿಂದ ಮೈತ್ರಿ ಸರ್ಕಾರ ಪತನವಾಗಿದೆ. ಇದರಲ್ಲಿ ನಮ್ಮ ಪಾತ್ರ ಏನೇನೂ ಇಲ್ಲ. ರಾಜ್ಯದಲ್ಲಿ ಸುಭದ್ರ ಸರ್ಕಾರ, ಅಭಿವೃದ್ದಿಗೆ ಒತ್ತು ನೀಡುವ ಆಡಳಿತ ನೀಡಲಷ್ಟೇ ನಾವು ಗಮನ ಹರಿಸುತ್ತೇವೆ. ಸಚಿವ ಸಂಪುಟ ರಚನೆ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ ಎಂದು ಅವರು ತಿಳಿಸಿದರು.

ನವಲಗುಂದ ಬಿಜೆಪಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾರ ಬಳಿಯೂ ಮಂತ್ರಿಗಿರಿಗೆ ಬೇಡಿಕೆ ಇಟ್ಟಿಲ್ಲ. ಪಕ್ಷದ ವರಿಷ್ಠರ ಸೂಚನೆಯನ್ನುತಪ್ಪದೇ ಪಾಲಿಸುತ್ತೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ.ಯಡಿಯೂರಪ್ಪ ತಮ್ಮನ್ನು ಬರುವಂತೆ ಸೂಚಿಸಿರುವುದರಿಂದ ಬೆಂಗಳೂರಿಗೆ ಆಗಮಿಸಿರುವುದಾಗಿ ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

Umesh Katti Trust Vote BS Yediyurappa Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ