ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮನವೊಲಿಸಿದ್ದು ಹೇಗೆ?

BJP Leaders

26-07-2019

ಬೆಂಗಳೂರು: ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿದರೂ ಚಿಂತೆಯಿಲ್ಲ. ಆದರೆ ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆ ತಪ್ಪಿಸುವ ಯತ್ನ ಮಾಡಿದರೆ ಅದಕ್ಕಾಗಿ ಪಕ್ಷ ದೊಡ್ಡ ಮಟ್ಟದ ದಂಡ ತೆರಬೇಕಾಗುತ್ತದೆ ಎಂದು ಕೆಲ ನಾಯಕರು ಬಿಜೆಪಿ ಹೈಕಮಾಂಡ್ ವರಿಷ್ಟರಿಗೆ ವಿವರ ನೀಡಿದ್ದಾರೆ.

ಯಡಿಯೂರಪ್ಪ ಅವರ ಜಾಗಕ್ಕೆ ಈಗಲೇ ಪರ್ಯಾಯ ನಾಯಕನನ್ನು ಹುಡುಕುವ ಯತ್ನ ಆರಂಭವಾಗಿರುವುದು ಗಮನಕ್ಕೆ ಬಂದ ಕೂಡಲೇ ಕೆಲ ನಾಯಕರು ಹೈಕಮಾಂಡ್ ಗಮನಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ.

ಯಾರೇನೇ ಹೇಳಿದರೂ ಕರ್ನಾಟಕದ ಬಿಜೆಪಿಗೆ ಯಡಿಯೂರಪ್ಪ ಅವರೇ ಸರ್ವೋನ್ನತ ನಾಯಕರು. ಈಗಲೂ ಅವರಿಂದಾಗಿ ಪಕ್ಷಕ್ಕೆ ಹೆಚ್ಚಿನ ಬಲ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕನನ್ನು ಗುರುತಿಸಲು ಹೊರಟರೆ ಅಪಾಯ ತಪ್ಪಿದ್ದಲ್ಲ ಎಂದವರು ಹೇಳಿದ್ದಾರೆ.

ಯಡಿಯೂರಪ್ಪ ಅವರ ಸೂಚನೆ ಮೇರೆಗೆ ದೆಹಲಿಗೆ ತೆರಳಿದ್ದ ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್, ಮಾಧುಸ್ವಾಮಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಹಲವು ಬಾರಿ ಭೇಟಿ ಮಾಡಿ ರಾಜ್ಯ ರಾಜಕಾರಣದ ಹಲವು ಸನ್ನಿವೇಶಗಳ ಕುರಿತು ಮಾಹಿತಿ ನೀಡಿದರು. ೧೯೮೩ ರಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ಸಿಎಂ ಹುದ್ದೆಯ ರೇಸಿನಲ್ಲಿ ಬಂಗಾರಪ್ಪ, ದೇವೇಗೌಡ, ಬೊಮ್ಮಾಯಿ ಅವರಂತಹ ಘಟಾನುಘಟಿ ನಾಯಕರಿದ್ದರು.

ಆದರೆ ರಾಮಕೃಷ್ಣ ಹೆಗಡೆ ಅವರು ತಮಗಿದ್ದ ಪ್ರಭಾವವನ್ನು ಬಳಸಿ ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಅವರ ಬೆಂಬಲದೊಂದಿಗೆ ಧಿಡೀರನೆ ಬಂದು ಕರ್ನಾಟಕದ ಮುಖ್ಯಮಂತ್ರಿಯಾದರು.

ಆಗವರು ವಿಧಾನಸಭೆ ಚುನಾವಣೆಯಲ್ಲೂ ಗೆದ್ದಿರಲಿಲ್ಲ. ಈ ಬೆಳವಣಿಗೆಯಿಂದ ಕ್ರುದ್ಧರಾದ ಕ್ರಾಂತಿರಂಗದ ಬಂಗಾರಪ್ಪ ಬೀದಿಯಲ್ಲೇ ಪ್ರತಿಭಟಿಸಿದರು.ಆದರೆ ಉಳಿದ ನಾಯಕರು ತಮಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ ಸುಮ್ಮನಿರಬೇಕಾಯಿತು.

೧೯೯೪ ರ ವಿಧಾನಸಭಾ ಚುನಾವಣೆಯ ನಂತರ ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೆ ಬರುವುದು ಖಚಿತವಾಗಿದ್ದರೂ ಶಾಸಕಾಂಗ ಪಕ್ಷದಲ್ಲಿ ಚುನಾವಣೆ ನಡೆಸುವ ಮೂಲಕ ನಾಯಕನನ್ನು ಆಯ್ಕೆ ಮಾಡೋಣ ಎಂದು ಇದೇ ರಾಮಕೃಷ್ಣ ಹೆಗಡೆ ಹೇಳಿದರು.

ಚುನಾವಣೆಗೂ ಮುನ್ನ ದೇವೇಗೌಡರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ ಪರಿಣಾಮವಾಗಿ ಹಳೇ ಮೈಸೂರು ಭಾಗದ ಬಹುತೇಕ ಕ್ಷೇತ್ರಗಳು ಜನತಾದಳದ ಪರವಾಗಿ ನಿಂತಿದ್ದವು. ಆದರೆ ಹೆಗಡೆ ಅವರು ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಲು ಬಯಸಿದರು.

ಇದರ ಸುಳಿವು ಸಿಗುತ್ತಲೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ದಿನ ರಾಮನಗರ, ಚನ್ನಪಟ್ಟಣ ಸೇರಿದಂತೆ ಹಳೇ ಮೈಸೂರಿನ ವಿವಿಧ ಕ್ಷೇತ್ರಗಳಿಂದ ಬೆಂಗಳೂರಿಗೆ ಬಂದ ಲಕ್ಷಕ್ಕೂ ಹೆಚ್ಚು ಜನ ವಿಧಾನಸೌಧಕ್ಕೇ ಮುತ್ತಿಗೆ ಹಾಕಿದರು.

ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಆ ಸಂದರ್ಭದಲ್ಲಿ ಬಹುದೊಡ್ಡ ರಕ್ತಪಾತವೇ ನಡೆದು ಹೋಗುತ್ತಿತ್ತು. ಆದರೆ ಈ ಬೆಳವಣಿಗೆಯನ್ನು ನಿರೀಕ್ಷಿಸದ ಹೆಗಡೆ, ಇವೆಲ್ಲ ನಮ್ಮ ಪಕ್ಷದ ಸಂಸ್ಕೃತಿಯಲ್ಲಿಲ್ಲ ಎಂಬ ಮಾತನಾಡಿದರು. ನಂತರ ಬಿಜು ಪಾಟ್ನಾಯಕ್ ಅವರು ನೂತನ ಶಾಸಕಾಂಗ ನಾಯಕರಾಗಿ ದೇವೇಗೌಡ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ ಹೋಗಬೇಕಾಯಿತು.

ಆದರೆ ಈಗ ರಾಜಕೀಯ ಪ್ರಜ್ಞೆ ವಿಪರೀತವಾಗಿ ಬೆಳೆದಿರುವ ಈ ಸಂದರ್ಭದಲ್ಲಿ ಲಿಂಗಾಯತ ಸಮುದಾಯ ಮಾತ್ರವಲ್ಲ, ಯಡಿಯೂರಪ್ಪ ಸಿಎಂ ಆಗಲಿ ಎಂದು ಕಾತರಿಸುತ್ತಿರುವವರೂ ಬಹು ಎಚ್ಚರಿಕೆಯಿಂದ ಸನ್ನಿವೇಶವನ್ನು ಗಮನಿಸಿ ನೋಡುತ್ತಿದ್ದಾರೆ.

ಹೀಗಿರುವಾಗ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕನ ಹುಡುಕಾಟ ನಡೆದಿದೆ ಎಂಬ ಮಾಹಿತಿ ತಲುಪಿದರೆ ದೊಡ್ಡ ಸ್ವರೂಪದ ದಂಗೆಯೇ ನಡೆದು ಹೋಗಬಹುದು. ಹೀಗಾಗಿ ಸಧ್ಯದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರ ರಚಿಸುವ ಕಾಲ ಬಂದರೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಿ.

ಒಂದು ವೇಳೆ ಪರಿಸ್ಥಿತಿ ಕೈ ಮೀರಿದರೆ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆಯನ್ನಾದರೂ ಹೇರಿ. ಆದರೆ ಯಾವ ಕಾರಣಕ್ಕೂ ಯಡಿಯೂರಪ್ಪ ಅವರಿಗೆ ಇಂತವರು ಪರ್ಯಾಯ ನಾಯಕ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಬೇಡಿ. ಇದರಿಂದ ಕರ್ನಾಟಕದಲ್ಲಿ ಪಕ್ಷ ಅಪಾಯಕಾರಿ ಹೊಡೆತ ತಿನ್ನುವ ಪರಿಸ್ಥಿತಿ ಬರುತ್ತದೆ ಎಂದು ಈ ನಾಯಕರು ಹೈಕಮಾಂಡ್ ವರಿಷ್ಟರಿಗೆ ವಿವರ ನೀಡಿದ್ದಾರೆ.

ಈ‌ ಎಲ್ಲಾ ಮಾಹಿತಿಯನ್ನು ‌ಅವಲೋಕಿಸಿದ ವರಿಷ್ಠರು ಅಂತಿಮವಾಗಿ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅನುಮತಿ ನೀಡಿದರು. ಅದರೆ ಈ ಬಾರಿ ಸಾಕಷ್ಟು ಎಚ್ಚರಿಕೆ ವಹಿಸಬೇಕು ಕಳೆದ ಬಾರಿಯಂತೆ ಗೊಂದಲ ಮಾಡಿಕೊಂಡು ಮುಖಭಂಗ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಿದರೆನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

BJP Leaders BS Yediyurappa BJP High command Amitha Shah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ