ಜೆಡಿಎಸ್ ಜೊತೆ ಮೈತ್ರಿಗೆ ರೆಡಿಯಾಯ್ತು ಕಮಲಪಡೆ?

Karnataka Government

25-07-2019

ಬೆಂಗಳೂರು: ನೂತನ ಸರ್ಕಾರ ರಚಿಸಲು ಬಿಕ್ಕಟ್ಟು ಎದುರಾಗುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಇದೀಗ ಸಿಎಂ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ್ದು, ಪರ್ಯಾಯ ಸರ್ಕಾರ ರಚನೆಗೆ ನಮ್ಮೊಂದಿಗೆ ಕೈ ಜೋಡಿಸಿ ಎಂದಿರುವ ಅಂಶ ಬೆಳಕಿಗೆ ಬಂದಿದೆ.

ವಿಧಾನಸಭೆಯ ಶಾಸಕ ಬಲ 225 ಇರುವುದರಿಂದ ಸರ್ಕಾರ ರಚಿಸಲು 113 ಶಾಸಕರ ಬೆಂಬಲ ತಮಗಿದೆ ಎಂದು ರಾಜ್ಯ ಬಿಜೆಪಿ ರಾಜ್ಯಪಾಲರಿಗೆ ವಿವರಿಸಲೇಬೇಕು, ಮತ್ತದು ರಾಜ್ಯಪಾಲರಿಗೆ ಮನವರಿಕೆಯಾಗುವಂತಿರಬೇಕು.

ಆದರೆ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೆ ಉಳಿದಿರುವುದರಿಂದ ರಾಜ್ಯಾಂಗ ಬಿಕ್ಕಟ್ಟು ಸೃಷ್ಟಿಯಾಗುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಸದ್ಯ ಪರಿಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಕೈಗೂಡಿಸಿ ಸಮ್ಮಿಶ್ರ ಸರ್ಕಾರ ರಚಿಸುವುದು ಒಳ್ಳೆಯದು ಎಂದು ಬಿಜೆಪಿ ವರಿಷ್ಟರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.

ಉಳಿದ ಅವಧಿಯುದ್ದಕ್ಕೂ ನಮ್ಮವರೇ ಸಿಎಂ ಆಗಿರಲಿ, ನಿಮ್ಮ ಪಕ್ಷಕ್ಕೆ ಡಿಸಿಎಂ ಹುದ್ದೆ ಬಿಟ್ಟುಕೊಡುತ್ತೇವೆ. ಉಳಿದಂತೆ ಹಿಂದೆ ಮೈತ್ರಿ ಸರ್ಕಾರ ರಚಿಸಿ ಅನುಭವವಿರುವುದರಿಂದ ಮಾತುಕತೆಯ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದು ಎಂದು ಬಿಜೆಪಿ ವರಿಷ್ಟರು ವಿವರಿಸಿದ್ದಾರೆ.

ಆದರೆ ಬಿಜೆಪಿ ನಾಯಕರ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿರುವ ಕುಮಾರಸ್ವಾಮಿ, ಬಿಜೆಪಿ ಜತೆ ಕೈ ಜೋಡಿಸುವ ವಿಷಯದಲ್ಲಿ ನಮ್ಮ ತಂದೆಯವರಿಗೆ ಆಸಕ್ತಿ ಇಲ್ಲ. ಹೀಗಾಗಿ ಈ ಪ್ರಸ್ತಾಪಕ್ಕೆ ಸಹಮತ ಸೂಚಿಸುವ ಸ್ಥಿತಿಯಲ್ಲಿ ನಾನಿಲ್ಲ ಎಂದಿದ್ದಾರೆ. ಅತೃಪ್ತ ಶಾಸಕರು ಬಂದರೆ ತಮ್ಮ ಹಾದಿ ಸುಗಮ ಎಂದು ಭಾವಿಸಿದ್ದ ಬಿಜೆಪಿ ಇದೀಗ ಅತೃಪ್ತ ಶಾಸಕರ ಪಡೆ ತಮ್ಮ ಜತೆಯಲ್ಲಿದ್ದರೂ ಸಾಂವಿಧಾನಿಕವಾಗಿ ಮುಂದಡಿ ಇಡಲಾಗುತ್ತಿಲ್ಲ.

ಹೀಗೆ ಬಿಜೆಪಿ ವರಿಷ್ಟರು ಜೆಡಿಎಸ್ ನಾಯಕರೊಂದಿಗೆ ಮಾತನಾಡುತ್ತಿದ್ದ ವಿವರ ತಿಳಿಯುತ್ತಿದ್ದಂತೆಯೇ ಅತೃಪ್ತ ಶಾಸಕರ ಪೈಕಿ ಹಲವರು, ನಾವು ನಮ್ಮ ನಮ್ಮ ಪಕ್ಷಗಳಿಗೆ ಮರಳುತ್ತೇವೆ ಎನ್ನತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೇಡ ಎಂದು ಇಲ್ಲಿಗೆ ಬಂದರೆ ನೀವು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವುದಾದರೆ ನಾವು ಮರಳಿ ಮನೆಗೆ ಹೋಗುತ್ತೇವೆ. ನಮ್ಮ ರಾಜೀನಾಮೆಯನ್ನು ಹಿಂಪಡೆಯುತ್ತೇವೆ ಎಂದು ಈಗಾಗಲೇ ಹಲ ಶಾಸಕರು ಬಿಜೆಪಿ ನಾಯಕರ ಬಳಿ ವರಾತ ಎತ್ತಿದ್ದಾರೆ.

ಪರಿಣಾಮವಾಗಿ ರಾಜ್ಯ ಬಿಜೆಪಿ ನಾಯಕರು ಒಂದು ಬಗೆಯ ಸಂಕಟದಲ್ಲಿದ್ದರೆ ರಾಷ್ಟ್ರೀಯ ಬಿಜೆಪಿ ನಾಯಕರು ಕಡ್ಡಿ ಮುರಿದಂತೆ ಮಾತನಾಡತೊಡಗಿದ್ದು, ಅವರ ಮಾತಿನ ಧಾಟಿ ಹೇಗಿದೆ ಎಂದರೆ ತಮ್ಮ ಪಕ್ಷದ ನಾಯಕರ ಮಾತು ಕೇಳಿ ರಾಜೀನಾಮೆ ನೀಡಿದವರ ಹಿತವನ್ನು ಅವರು ಪರಿಗಣಿಸುತ್ತಿಲ್ಲ. ಇದು ಗಾಬರಿಯ ವಿಷಯ ಎಂದು ರಾಜೀನಾಮೆ ನೀಡಿರುವ ಶಾಸಕರೊಬ್ಬರು ಪತ್ರಿಕೆಗೆ ತಿಳಿಸಿದರು.

ಈ ಮಧ್ಯೆ ಅತೃಪ್ತ ಶಾಸಕರ ಪೈಕಿ ಕೆಲವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪೋನು ಮಾಡಿ, ನಮ್ಮನ್ನು ಬಲವಂತದಿಂದ ಇಲ್ಲಿರಿಸಲಾಗಿದೆ. ನಾವು ರಾಜೀನಾಮೆ ನೀಡಿರುವುದು ತಪ್ಪು. ಆದರೂ ನಮ್ಮನ್ನು ರಕ್ಷಿಸಿ, ಕೈ ಬಿಡಬೇಡಿ ಎಂದು ಮನವಿ ಮಾಡಿಕೊಂಡಿರುವುದಾಗಿ ಮೂಲಗಳು ಹೇಳಿವೆ.

 


ಸಂಬಂಧಿತ ಟ್ಯಾಗ್ಗಳು

Congress BJP JDS Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ