ರಾಜೀನಾಮೆ ಇತ್ಯರ್ಥವಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ?

President Rule in Karnataka?

25-07-2019

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ನೂತನ ಸರ್ಕಾರ ರಚಿಸುವ ಆತುರದಲ್ಲಿದ್ದ ರಾಜ್ಯ ಬಿಜೆಪಿ ಇದೀಗ ಮಂಕಾಗಿದ್ದು, ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದಿದ್ದರೆ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಲು ಕಮಲ ಪಾಳೆಯದ ವರಿಷ್ಟರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗಬೇಕು. ಅವರ ರಾಜೀನಾಮೆ ಅಂಗೀಕಾರವಾಗದಿದ್ದರೆ, ಇಲ್ಲವೇ ಅವರು ಅನರ್ಹಗೊಳ್ಳದಿದ್ದರೆ ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಲು ಸಾಧ್ಯವಿಲ್ಲ ಎಂದು ವರಿಷ್ಟರು ಹೇಳಿರುವುದು ರಾಜ್ಯದ ಬಿಜೆಪಿ ನಾಯಕರು ಕಂಗಾಲಾಗುವಂತೆ ಮಾಡಿದೆ.

ಹೀಗೆ ಸಮ್ಮಿಶ್ರ ಸರ್ಕಾರ ಬೀಳಿಸಿದ ಕೂಡಲೇ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂಬ ಲೆಕ್ಕಾಚಾರದಲ್ಲಿದ್ದ ಕಮಲ ಪಾಳೆಯ ಈಗ ರಾಷ್ಟ್ರಪತಿ ಆಳ್ವಿಕೆ ಬಂದರೆ ಗತಿ ಏನು?ಎಂಬ ಆತಂಕದಲ್ಲಿದೆ. ಉನ್ನತ ಮೂಲಗಳ ಪ್ರಕಾರ, ಶಾಸಕರ ರಾಜೀನಾಮೆ ಪ್ರಕರಣ ಬೇಗ ಇತ್ಯರ್ಥವಾದರೆ ಸರ್ಕಾರ ರಚಿಸೋಣ. ಇಲ್ಲವೇ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರೋಣ. ಆನಂತರವೂ ಬಹುಮತ ಸಾಬೀತುಪಡಿಸುವ ಸ್ಥಿತಿ ಬರದಿದ್ದರೆ ಮಧ್ಯಂತರ ಚುನಾವಣೆಗೆ ಅಣಿಯಾಗೋಣ ಎಂದು ಹೈಕಮಾಂಡ್ ವರಿಷ್ಟರು ಹೇಳಿದ್ದಾರೆ.

ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿದ್ದು ರಾಜೀನಾಮೆ ನೀಡಿ ಮುಂಬಯಿಗೆ ಹೋಗಿದ್ದ ಬಹುತೇಕ ಶಾಸಕರು ಇದೀಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣ ಕಂಡರೆ ನಾವು ವಾಪಸ್ ನಮ್ಮ ಪಕ್ಷಗಳಿಗೆ ಹೋಗುತ್ತೇವೆ ಎನ್ನತೊಡಗಿದ್ದಾರೆ.

ಹೀಗಾಗಿ ರಾಜ್ಯ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು ಮುಂದೇನು?ಎಂಬ ಪ್ರಶ್ನೆಗೆ ಯಾರೂ ಉತ್ತರ ಕೊಡಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಹಿಂದೆ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಹೇಳಿದಾಗ ಈ ಕುರಿತು ಕ್ರಮ ಕೈಗೊಳ್ಳಲು ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಪರ ವಕೀಲರು ಸುಪ್ರೀಂಕೋರ್ಟ್ ಮುಂದೆ ಹೇಳಿದ್ದರು.

ಹೀಗಾಗಿ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೆ ಹೋದರೆ ರಾಜ್ಯಾಂಗ ಬಿಕ್ಕಟ್ಟು ಸೃಷ್ಟಿಯಾಗುವುದು ಖಚಿತವಾಗಿದ್ದು ಜುಲೈ ಮೂವತ್ತೊಂದರೊಳಗೆ ಹಣಕಾಸು ಮಸೂದೆಗೆ ಅಂಗೀಕಾರ ಪಡೆಯದಿದ್ದರೆ ನೌಕರರ ವೇತನವೂ ಸೇರಿದಂತೆ ಯಾವ ಬಾಬ್ತಿನಲ್ಲೂ ಒಂದು ಪೈಸೆ ಪಡೆಯುವುದು ಕಷ್ಟದ ಕೆಲಸವಾಗುತ್ತದೆ.

ಒಂದು ವೇಳೆ ಗೊಂದಲ ಹೀಗೆ ಮುಂದುವರಿಯುವ ಲಕ್ಷಣ ಕಂಡರೆ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ಕರ್ನಾಟದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವುದು. ನಂತರ ರಾಜ್ಯಪಾಲರ ಮೂಲಕ ಸಂಸತ್ತಿನಲ್ಲಿ ಹಣಕಾಸು ಮಸೂದೆಗೆ ಅಂಗೀಕಾರ ಪಡೆಯುವುದು ಅನಿವಾರ್ಯ ಎಂದು ಬಿಜೆಪಿ ಹೈಕಮಾಂಡ್ ವರಿಷ್ಟರು ರಾಜ್ಯದ ನಾಯಕರಿಗೆ ಹೇಳಿದ್ದಾರೆ.

ಸರ್ಕಾರವನ್ನು ಉರುಳಿಸುವಾಗ ಮುಂದಿನ ಬೆಳವಣಿಗೆ ಸರಾಗ ಎಂದು ಭಾವಿಸಿದ್ದ ಬಿಜೆಪಿ ನಾಯಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ಷಾಕ್ ಹೇಗಿದೆ ಎಂದರೆ ರಾಜ್ಯಾಂಗ ಬಿಕ್ಕಟ್ಟು ಉದ್ಭವವಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದೇ ತಲೆನೋವಿನ ಸಂಗತಿಯಾಗಿ ಪರಿಣಮಿಸಿದೆ.

ಒಂದು ವೇಳೆ ಶಾಸಕರ ರಾಜೀನಾಮೆ ವಿಷಯ ಅಂಗೀಕಾರವಾಗದಿದ್ದರೆ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರೋಣ. ಆನಂತರ ಒಂದೋ ಸರ್ಕಾರ ರಚಿಸಲು ಪೂರಕವಾದ ಬಹುಮತ ಸಾಬೀತು ಮಾಡಲು ಅಣಿಯಾಗಿ. ಇಲ್ಲವೇ ವಿಧಾನಸಭೆಗೆ ಮಧ್ಯಂತರ ಚುನಾವಣೆಯನ್ನು ಎದುರಿಸಲು ಸಜ್ಜಾಗಿ ಎಂದು ವರಿಷ್ಟರು ಹೇಳಿರುವುದು ರಾಜ್ಯದ ನಾಯಕರಿಗೆ ನುಂಗಲಾರದ ತುತ್ತಾಗಿದೆ.

ತಮ್ಮನ್ನು ಭೇಟಿ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈ ವಿಷಯವನ್ನು ಸ್ಪಷ್ಟವಾಗಿ ಹೇಳಿರುವುದರಿಂದ ಶಾಸಕರ ರಾಜೀನಾಮೆ ಪ್ರಕರಣವನ್ನು ಸುಪ್ರೀಂಕೋರ್ಟ್ ಮುಂದೆ ಮತ್ತೆ ಕೊಂಡೊಯ್ಯಲು ಸಾಧ್ಯವೇ? ಎಂದು ಬಿಜೆಪಿ ನಾಯಕರು ಯೋಚಿಸುತ್ತಿದ್ದಾರೆ.

ಆದರೆ ಈ ಹಿಂದೆಯೇ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಪಡಿಸಲು ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಸ್ಪೀಕರ್ ಹೇಳಿರುವುದರಿಂದ ಅದು ಕೂಡಾ ಗಡಿಬಿಡಿ ಮಾಡುವ  ಸ್ಥಿತಿಯಲ್ಲಿಲ್ಲ ಎಂಬುದು ಕಾನೂನು ತಜ್ಞರ ಹೇಳಿಕೆ.

ಇಂದು ಬೆಳಿಗ್ಗೆ ಅಮಿತ್ ಶಾ ಅವರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದಾಗ ಅವರು ಏನು ಹೇಳಿದ್ದರೋ? ಮಧ್ಯಾಹ್ನ ಮೂರು ಗಂಟೆಗೆ ಹೋದಾಗಲೂ ಅದೇ ಉತ್ತರ ಪುನರಾವರ್ತನೆಯಾಯಿತು. ಸಧ್ಯದ ಪರಿಸ್ಥಿತಿಯಲ್ಲಿ ನಾವು ಕೂಡಾ ತಾಳ್ಮೆಯಿಂದ ಹೆಜ್ಜೆಯಿಡಲೇಬೇಕು.ಇಲ್ಲದೆ ಹೋದರೆ ದೇಶದ ಮುಂದೆ ವಿಲನ್‍ಗಳಾಗುವ ಸ್ಥಿತಿ ಬರಬಹುದು ಎಂದು ಅಮಿತ್ ಶಾ ಹೇಳಿದಾಗ ಅವರನ್ನು ಭೇಟಿ ಮಾಡಲು ಹೋಗಿದ್ದ ರಾಜ್ಯದ ಬಿಜೆಪಿ ನಾಯಕರಿಗೆ ಬೇರೆ ದಾರಿಯೇ ಕಾಣಲಿಲ್ಲ.

ಈ ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ಅವರು,ರಾಜೀನಾಮೆ ನೀಡಿರುವ ಶಾಸಕರನ್ನು ನಿಯಮಾವಳಿಯ ಪ್ರಕಾರ ವಿಚಾರಣೆಗೆ ಕರೆದಿದ್ದೆ.ಆದರೆ ಅವರು ಹಾಜರಾಗಲಿಲ್ಲ.ಹೀಗಿರುವಾಗ ಮತ್ತೊಮ್ಮೆ ಅವರನ್ನು ಕರೆಯುವುದಿಲ್ಲ ಎಂದರು.

ಹಾಗೆಯೇ ಇಂದು ಮಧ್ಯಾಹ್ನ ವಿಧಾನಸಭೆಯ ಕಾರ್ಯದರ್ಶಿಯನ್ನು ತಮ್ಮ ಸರ್ಕಾರಿ ನಿವಾಸಕ್ಕೆ ಕರೆಸಿಕೊಂಡ ಅವರು,ಮುಂದೇನು ಮಾಡುತ್ತೇವೆ ಎಂಬ ಸುಳಿವು ಬಿಟ್ಟು ಕೊಡದೆ ಹೊರಗೆ ತೆರಳಿದರು. ಪರಿಣಾಮವಾಗಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು ಅಂತಿಮ ಉತ್ತರವೇನು? ಅನ್ನುವುದು ಯಾರಿಗೂ ತೋಚದ ಸ್ಥಿತಿ ಎದುರಾಗಿದೆ.


ಸಂಬಂಧಿತ ಟ್ಯಾಗ್ಗಳು

President Rule Karnataka Government MLA Resignation BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ