ಕೇಂದ್ರ-ರಾಜ್ಯದಲ್ಲಿ ಬಿಜೆಪಿ- ಅನುಕೂಲವಾಗುತ್ತಾ ರಾಜ್ಯಕ್ಕೆ?

Karnataka Government

24-07-2019

ಬೆಂಗಳೂರು: ಬಹುಕಾಲದ ನಂತರ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷವೇ ರಾಜ್ಯದಲ್ಲೂ ಅಧಿಕಾರ ಹಿಡಿಯುತ್ತಿರುವ ಬೆಳವಣಿಗೆ ರಾಜ್ಯ ರಾಜಕೀಯದ ಒಳವಲಯಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

1991 ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಾಗ ಅದು ಅಲ್ಪಮತದ ಸರ್ಕಾರವಾಗಿದ್ದರೂ ಉಳಿದಂತೆ ಬೇರೆ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಮುಂದುವರಿದಿತ್ತು. ಹೀಗೆ ಅದು ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ ಪಕ್ಷದ ಎಸ್.ಬಂಗಾರಪ್ಪ. ಆದರೆ ಬಂಗಾರಪ್ಪ 1992 ರಲ್ಲಿ ವೀರಪ್ಪ ಮೊಯ್ಲಿ 1994 ರಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಹೀಗಾಗಿ ನರಸಿಂಹರಾವ್ ಸರ್ಕಾರ ಐದು ವರ್ಷ ಇತ್ತಾದರೂ  ಅದರ ಲಾಭವನ್ನು ದೊಡ್ಡ ಮಟ್ಟದಲ್ಲಿ ಪಡೆಯಲು ರಾಜ್ಯಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ 1994 ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರ ನೇತೃತ್ವದ ಜನತಾದಳ ಅಧಿಕಾರ ಹಿಡಿಯಿತು.

ಹೀಗಾಗಿ ನಂತರದ ಎರಡು ವರ್ಷಗಳ ಕಾಲ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತಾದರೆ ರಾಜ್ಯದಲ್ಲಿ ಜನತಾದಳದ ಆಳ್ವಿಕೆ ಇತ್ತು. 1996 ರಲ್ಲಿ ದೇವೇಗೌಡರು ಪ್ರಧಾನಿಯಾಗಿ ರಾಜ್ಯದಲ್ಲಿ ಜನತಾದಳ ಸರ್ಕಾರ ಅಸ್ತಿತ್ವದಲ್ಲಿತ್ತಾದರೂ ಕೇಂದ್ರ ಸರ್ಕಾರ ಕಾಂಗ್ರೆಸ್ ಬೆಂಬಲದೊಂದಿಗೆ ಅಸ್ತಿತ್ವದಲ್ಲಿದ್ದುದರಿಂದ ಕರ್ನಾಟಕ ನಿರೀಕ್ಷಿತ ಶಕ್ತಿ ಪಡೆಯಲು ಸಾಧ್ಯವಾಗಲಿಲ್ಲ.

ಮುಂದೆ ಎಸ್.ಎಂ.ಕೃಷ್ಣ 1999 ರಲ್ಲಿ ಅಧಿಕಾರಕ್ಕೆ ಬಂದಾಗ ದಿಲ್ಲಿಯಲ್ಲಿ ಎನ್.ಡಿ.ಎ ಅಧಿಕಾರ ಸೂತ್ರ ಹಿಡಿದಿತ್ತು. 2004 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರ ಹಿಡಿಯಿತಾದರೂ ಇಲ್ಲಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಕಾಂಗ್ರೆಸ್ ವಿಫಲವಾಗಿ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಯಿತು.

ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ 2008 ರಿಂದ 2013 ರವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತಾದರೂ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿತ್ತು. ಹಾಗೆ ನೋಡಿದರೆ 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತಾದರೂ ಅದು ಬಹುಕಾಲ ಮುಂದುವರಿಯಲಿಲ್ಲ.

ಯಾಕೆಂದರೆ 2014 ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಹೀನಾಯ ಸೋಲು ಕಂಡು ಇಲ್ಲಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಹಲವು ಸವಾಲುಗಳೊಂದಿಗೆ ಮುಂದುವರಿಯಬೇಕಾದ ಪರಿಸ್ಥಿತಿ ಬಂತು. ಈಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕುಸಿದ ಮೇಲೆ ಮತ್ತೆ ಕೇಂದ್ರದ ಜತೆ  ರಾಜ್ಯದಲ್ಲೂ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಪಕ್ಕಾ ಆಗಿದೆ. ಮುಂದಿನ ಕತೆ ಹೇಗೋ? ಏನೋ? ಆದರೆ ಇಲ್ಲಿ ಮತ್ತು ದಿಲ್ಲಿಯಲ್ಲಿ ಒಂದೇ ಪಕ್ಷ ಅಧಿಕಾರ ಹಿಡಿದಿರುವುದರ ಪ್ರಯೋಜನ ರಾಜ್ಯಕ್ಕೆ ಆಗಲಿದೆ ಎಂಬ ಬಾವನೆ ಇದೆ.

ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ?ಎಂಬುದು ಒಂದು ಪ್ರಶ್ನೆಯಾದರೂ ಬಹು ಕಾಲದ ನಂತರ ಮತ್ತೆ ಇಂತಹ ಬೆಳವಣಿಗೆ ನಡೆಯುತ್ತಿರುವುದು ಕರ್ನಾಟಕಕ್ಕೆ ಅನುಕೂಲದ ಪರಿಸ್ಥಿತಿಯನ್ನು ಸೃಷ್ಟಿಸಲಿದೆ ಎಂಬ ಭಾವನೆಯನ್ನಂತೂ ಮೂಡಿಸಿದೆ.


ಸಂಬಂಧಿತ ಟ್ಯಾಗ್ಗಳು

BJP Karnataka Government Central Government Development


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ