ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕೈ ಪಾಳಯದಲ್ಲಿ ಹಗ್ಗಜಗ್ಗಾಟ!

Who will become Karnataka’s congress opposition party leader?

24-07-2019

ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆಯೇ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು ಮಾಜಿ ಸಿಂ ಸಿದ್ಧರಾಮಯ್ಯ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಮಧ್ಯೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬರಲು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕೂಡಾ ಪೈಪೋಟಿ ಆರಂಭಿಸಿದ್ದು ಸದರಿ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ಧರಾಮಯ್ಯ ಅವರೇ ಬಂದು ಕೂರಬೇಕು. ಆ ಮೂಲಕ ಬಿಜೆಪಿ ಸರ್ಕಾರಕ್ಕೆ ಸೆಡ್ಡು ಹೊಡೆಯಬೇಕು ಎಂದು ಪಕ್ಷದ ಬಹುತೇಕ ಶಾಸಕರು ನೇರವಾಗಿಯೇ ಹೇಳುತ್ತಿದ್ದಾರೆ. ಈ ಹಿಂದೆ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ನಡೆಸಿದ  ಹೋರಾಟದ ಫಲವಾಗಿಯೇ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ವಿರುದ್ಧ ಪ್ರಬಲ ಹೋರಾಟ ನಡೆಸಲು ಸಾಧ್ಯವಾಯಿತು. ಅಧಿಕಾರ ಹಿಡಿಯಲು ನೆರವಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿದ್ದ ಆಕ್ರಮ ಗಣಿಗಾರಿಕೆ ವಿರುದ್ಧ ಸಿದ್ಧರಾಮಯ್ಯ ಅವರು ನಡೆಸಿದ ಹೋರಾಟ ಕೇವಲ ರಾಜ್ಯ ಮಟ್ಟದಲ್ಲಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಎಲ್ಲರ ಗಮನ ಸೆಳೆದಿತ್ತು.

ಹಾಗೆಯೇ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತು ಸಿದ್ಧರಾಮಯ್ಯ ಅವರು ನಡೆಸಿದ ನಿರಂತರ ಹೋರಾಟದ ಫಲವಾಗಿ ಪಕ್ಷದ ಶಕ್ತಿ ಹೆಚ್ಚಿತು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿದ್ಧರಾಮಯ್ಯ ಅವರನ್ನೇ ಪ್ರತಿಪಕ್ಷ ನಾಯಕರನ್ನಾಗಿ ನೇಮಕ ಮಾಡಬೇಕು ಎಂಬ ಧ್ವನಿ ಗಟ್ಟಿಯಾಗುತ್ತಿದೆ.

ಈ ಮಧ್ಯೆ ಅವರೇ ಪಕ್ಷದ ಶಾಸಕಾಂಗ ನಾಯಕರಾಗಿರುವುದರಿಂದ ಸಹಜವಾಗಿಯೇ ಅವರನ್ನು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತರುವುದು ಸೂಕ್ತ. ಹಾಗೆಯೇ ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ಸನ್ನಿವೇಶಗಳ ಆಧಾರದ ಮೇಲೆ ಪಕ್ಷದ ಹಿತಾಸಕ್ತಿ ಕಾಪಾಡುವ ಶಕ್ತಿ ಅವರಿಗಿದೆ ಎಂಬುದು ಹಲವರು ಮಂಡಿಸುತ್ತಿರುವ ವಾದ.

ಆದರೆ ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿರುವ ಡಾ.ಜಿ.ಪರಮೇಶ್ವರ್ ಅವರು ಸಹ, ಪ್ರತಿಪಕ್ಷ ನಾಯಕನ ಸ್ಥಾನವನ್ನು ತಮಗೇ ನೀಡಬೇಕು ಎಂದು ಲಾಬಿ ಆರಂಭಿಸಿದ್ದಾರೆ ಎಂದು ಮೂಲಗಳು ನುಡಿದಿವೆ. ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದುದರಿಂದ ಸಹಜವಾಗಿ ತಾವೇ ಪ್ರತಿಪಕ್ಷ ನಾಯಕರಾಗಬೇಕು. ಹಾಗೆಯೇ ನಾನು ಈ ಹಿಂದೆ ದುಸ್ಥಿತಿಯಲ್ಲಿದ್ದ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಕೆಪಿಸಿಸಿ ಅಧ್ಯಕ್ಷನಾಗಿ ಸುಸ್ಥಿತಿಗೆ ತಂದವನು. ಈ ಎಲ್ಲ ಅಂಶವನ್ನು ಪರಿಗಣಿಸಿ ತಮ್ಮನ್ನು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತಂದು ಕೂರಿಸಬೇಕು ಎಂದು ಪರಮೇಶ್ವರ್ ವಾದಿಸಿದ್ದಾರೆ ಎನ್ನಲಾಗಿದೆ.

ಇದೇ ರೀತಿ ಪಕ್ಷ ಎದುರಿಸಿದ ಸಂಕಷ್ಟ ಕಾಲಗಳಲ್ಲಿ ವಿಷಕಂಠನಂತೆ ಅದನ್ನು ಪರಿಹರಿಸಲು ಯತ್ನಿಸಿದವನು ನಾನು. ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭಾ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಹೈಕಮಾಂಡ್ ಯತ್ನಿಸಿದಾಗ ಅಲ್ಲಿನ ಶಾಸಕರನ್ನು ಸೇಫ್ ಮಾಡಿ,ಅಹ್ಮದ್ ಪಟೇಲ್ ಅವರ ಗೆಲುವಿಗೆ ಕಾರಣನಾದವನು ನಾನು.ಇದೇ ರೀತಿ ಹಲವು ಸಂದರ್ಭಗಳಲ್ಲಿ ನನ್ನ ನೋವನ್ನು ಲೆಕ್ಕಿಸದೆ ಮುನ್ನುಗ್ಗಿ ಪಕ್ಷದ ಹಿತ ಕಾಪಾಡಿದವನು ನಾನು. ಹೀಗಾಗಿ ತಮಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಪಟ್ಟು.

ಕುತೂಹಲದ ಸಂಗತಿ ಎಂದರೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡಲಾಗದಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾದರೂ ನೇಮಕ ಮಾಡಬೇಕು ಎಂದು ಪರಮೇಶ್ವರ್ ಹಾಗೂ ಡಿಕೆಶಿ ವರಿಷ್ಟರ ಮುಂದೆ ವಾದಿಸಿರುವುದು.

ಈ ಪೈಕಿ ಪರಮೇಶ್ವರ್ ಹಿಂದೆ ತಾವು ಆರು ವರ್ಷಗಳಿಗೂ ಹೆಚ್ಚು ಕಾಲ ಕೆಪಿಸಿಸಿ ಅಧ್ಯಕ್ಷರಾಗಿರುವುದು ನೆರವಿಗೆ ಬರಲಿದೆ ಎಂದು ಭಾವಿಸಿದ್ದರೆ, ತಮಗೆ ಹಲವು ಬಾರಿ ಕೆಪಿಸಿಸಿ ಅಧ್ಯಕ್ಷರಾಗಲು ಹೈಕಮಾಂಡ್ ನೀಡಿದ್ದ ಸಲಹೆಯನ್ನು ಎನ್‍ಕ್ಯಾಶ್ ಮಾಡಿಕೊಳ್ಳಲು ಡಿಕೆಶಿ ಹೊರಟಿದ್ದಾರೆ. ಆ ಮೂಲಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ಧರಾಮಯ್ಯ ಬಂದು ಕೂರುವುದು ಬಹುತೇಕ ಖಚಿತ ಆಗಿದೆ.


ಸಂಬಂಧಿತ ಟ್ಯಾಗ್ಗಳು

DK Shivkumar G Parameshwar Siddaramaiah Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ