ಸರ್ಕಾರ ರಚನೆಗೆ ಹೈಕಮಾಂಡ್ ತಾತ್ಕಾಲಿಕ ಬ್ರೇಕ್!

Madhuswamy Statement

24-07-2019

ಬೆಂಗಳೂರು: ಮೈತ್ರಿ ಸರ್ಕಾರ ಪತನ ಹೊಂದುತ್ತಿದ್ದಂತೆ ಹೊಸ ಉತ್ಸಾಹದಿಂದ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಬ್ರೇಕ್ ಹಾಕಿದೆ. ಮುಂದಿನ ಸೂಚನೆ ನೀಡುವವರೆಗೆ ಸರ್ಕಾರ ರಚನೆ ಸಂಭಂದಿಸಿದ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಯಡಿಯೂರಪ್ಪ ನಿವಾಸದಲ್ಲಿ ಸರ್ಕಾರ ರಚನೆ ಸಂಭಂದ ಸಭೆ ನಡೆಯಿತು. ಇದರಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‍ರಾವ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಖಂಡರಾದ ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ, ವಿ.ಸೋಮಣ್ಣ, ಚಂದ್ರಪ್ಪ, ಹಾಲಪ್ಪ ಆಚಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ  ಶಾಸಕ ಜೆಸಿ ಮಾಧುಸ್ವಾಮಿ ಅವರು, ಸದ್ಯಕ್ಕೆ ಸರ್ಕಾರ ರಚನೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದರು. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ನಮ್ಮದೇ ಆದ ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತಿದೆ. ಆದ್ದರಿಂದ ಹೈಕಮಾಂಡ್ ಸೂಚನೆಗೆ ಎದುರು ನೋಡುತ್ತಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಸಂಸದೀಯ ಮಂಡಳಿಯಲ್ಲಿ ಸರ್ಕಾರ ರಚನೆಯ ಕುರಿತು ತೀರ್ಮಾನ ಆಗಬೇಕಿದೆ. ಆ ಬಳಿಕ ಅವರು ಶಾಸಕಾಂಗ ಸಭೆ ನಡೆಸಲು ಸೂಚನೆ ನೀಡುತ್ತಾರೆ. ಸಭೆಯಲ್ಲಿ ಪಾಲ್ಗೊಳ್ಳಲು ವೀಕ್ಷಕರನ್ನು ಕಳುಹಿಸುತ್ತಾರೆ. ಅವರ ಎದುರೇ ಶಾಸಕಾಂಗ ಸಭೆಯಲ್ಲಿ ಪಕ್ಷದ ನಾಯಕರ ಆಯ್ಕೆಯನ್ನು ಮಾಡಲಾಗುತ್ತದೆ ಎಂದರು.
ವೀಕ್ಷಕರು ಆಗಮಿಸಿದ ಬಳಿಕ ಶಾಸಕಾಂಗ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿವರಗಳು ಅವರಿಗೆ ತಲುಪಿದ ಬಳಿಕ ನಾವು ಮುಂದಿನ ಸಿದ್ಧತೆಗಳನ್ನು ನಡೆಸುತ್ತೇವೆ. ಆ ಬಳಿಕವೇ ರಾಜ್ಯಪಾಲರ ಭೇಟಿ ನಡೆಯಲಿದೆ. ಬೇರೆ ಪಕ್ಷಗಳಲ್ಲಿ ಇಂತಹ ಯಾವುದೇ ಸಿದ್ಧಾಂತ ಇಲ್ಲ, ರಾಷ್ಟ್ರಿಯ ಪಕ್ಷದ ಹಿನ್ನೆಲೆಯಲ್ಲಿ ನಮ್ಮ ಪಕ್ಷದಲ್ಲಿ ಎಲ್ಲವೂ ಪ್ರಜಾಪ್ರಭುತ್ವದ ಅಡಿಯಲ್ಲೇ ನಡೆಯಲಿದೆ‌‌ ಎಂದು ‌ವಿವರಿಸಿದರು.


ಸಂಬಂಧಿತ ಟ್ಯಾಗ್ಗಳು

Karnataka Government BS Yediyurappa BJP Leaders Madhuswamy Statement


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ