ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೆಸರಿನಲ್ಲಿ ಶೋಭಾ ವಿಶೇಷ ಅರ್ಚನೆ

Shobha Karandlaje makes puja in the name of Yadiyurappa

19-07-2019

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಬಿಎಸ್‍ವೈ ಹೆಸರಲ್ಲಿ ವಿಶೇಷ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದರು.

ಆಷಾಢದ 3ನೇ ಶುಕ್ರವಾರವಾದ ಇಂದು ಸಂಸದೆ ಶೋಭಾ ಕರಂದ್ಲಾಜೆ ಮೆಟ್ಟಿಲುಗಳ ಮೂಲಕ ಮೈಸೂರು ನಗರದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಚಾಮುಂಡೇಶ್ವರಿಯ ಗರ್ಭಗುಡಿಯಲ್ಲಿ ಕುಳಿತು ಯಡಿಯೂರಪ್ಪ ಹಾಗೂ ತಮ್ಮ ಕುಟುಂಬದ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು. ಈ ಬಾರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ದೇವಿ ಚಾಮುಂಡೇಶ್ವರಿ  ಬೇಡಿಕೊಂಡರು. ಚಾಮುಂಡೇಶ್ವರಿ ದೇಗುಲದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸುಮಾರು 10ನಿಮಿಷಗಳ ಕಾಲ ದೇವಾಲಯದಲ್ಲಿ ಕುಳಿತು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಸಾಮಾನ್ಯವಾಗಿ ಶೋಭಾ ಕರಂದ್ಲಾಜೆ ನವರಾತ್ರಿಯ ಸಂದರ್ಭದಲ್ಲಿ ಮಾತ್ರ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿ ಪೂಜೆ ಸಲ್ಲಿಸುತ್ತಿದ್ದರು.ಆದರೆ ಈ ಬಾರಿ ಆಷಾಢ ಶುಕ್ರವಾರ ಪೂಜೆ ಸಲ್ಲಿಸಿರುವುದು ವಿಶೇಷವಾಗಿದೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ಅವರು ಕಾಂಗ್ರೆಸ್ ಹಾಗೂ ಸರ್ಕಾರದ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು ಬರ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಇದ್ದರೂ ಸರ್ಕಾರ ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದರು.ಈ ಮಧ್ಯೆ ಅಲ್ಪಮತ ಸರ್ಕಾರವಿದ್ದರೂ ರಾಜೀನಾಮೆ ಕೊಟ್ಟು ಕುಮಾರಸ್ವಾಮಿ ಹೋಗಬೇಕಿತ್ತು. ಆದರೆ ಕುರ್ಚಿಗೆ ಅಂಟಿಕೊಂಡಿರುವ ಕುಮಾರಸ್ವಾಮಿ ವಾಮ ಮಾರ್ಗದಿಂದ ಸರ್ಕಾರವನ್ನು ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸ್ಪೀಕರ್ ಮೇಲೆ ಒತ್ತಡ ಹಾಕಿ ಕೆಲಸ ಮಾಡುತ್ತಿದ್ದು,ಈ ಸರ್ಕಾರ ಸುಪ್ರೀಂ ಕೋರ್ಟ್‍ಗೆ , ರಾಜ್ಯಪಾಲರಿಗೆ ಹಾಗೂ ಸಂವಿಧಾನಕ್ಕೆ ಗೌರವ ಕೊಡುತ್ತಿಲ್ಲ. ಪ್ರಜಾಪ್ರಭುತ್ವದ ವಿರುದ್ಧವಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದ ಅವರು, ಶಾಸಕರನ್ನು ಕಿಡ್ನಾಪ್ ಮಾಡಲು ಅವರೇನು ಚಿಕ್ಕ ಮಕ್ಕಳಾ ಎಂದು ಕೇಳಿದರು.

ಸರ್ಕಾರದ ವಿರುದ್ಧ ಶಾಸಕರು ಇದ್ದಾರೆ ಅದ್ದರಿಂದಲೇ ಅವರು ಸ್ವಇಚ್ಛೆಯಿಂದಲೇ ಹೋಗಿದ್ದಾರೆ. ಇದನ್ನು ಸ್ವತಃ ಅವರೇ ಹೇಳಿದ್ದಾರೆ ಎಂದ ಶೋಭಾ ಕರಂದ್ಲಾಜೆ, ಐಎಂಎ ಹಗರಣ ಪ್ರಮುಖ ಆರೋಪಿ ಮನ್ಸೂರ್ ಖಾನ್ ಬಂಧನವಾಗಿರುವುದು ಒಳ್ಳೆಯದೇ ಎಂದರು.
 


ಸಂಬಂಧಿತ ಟ್ಯಾಗ್ಗಳು

Shobha karandlaje BS Yadiyurappa BJP JDS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ