‘ಬಿಜೆಪಿ ಸೇರಲು 30 ಕೋಟಿ ಆಫರ್’!

Srinivas Gowda Statement

19-07-2019

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ರಾಜಕೀಯ ವಿದ್ಯಮಾನಗಳು ತೀವ್ರ ಕುತೂಹಲ ಮೂಡಿಸಿರುವ ಬೆನ್ನಲ್ಲೇ, ತಮಗೆ ಬಿಜೆಪಿ ಸೇರಲು ಮೂವತ್ತು ಕೋಟಿ ರೂಪಾಯಿ ಆಮಿಷವೊಡ್ಡಲಾಗಿತ್ತು ಎಂದು ವಿಧಾನಸಭೆಯಲ್ಲಿ ಮಾಜಿ ಸಚಿವ ಶ್ರೀನಿವಾಸಗೌಡ ಆಪಾದಿಸಿದರು.
ವಿಶ್ವಾಸಮತ ಯಾಚನೆಯ ವೇಳೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಅಶ್ವಥ್ ನಾರಾಯಣ್ ಮತ್ತು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ನನ್ನ ಮನೆಗೆ ಬಂದಿದ್ದರು, ಬಿಜೆಪಿ ಸೇರುವಂತೆ ಆಹ್ವಾನ ನೀಡಿದರು. ಮಂತ್ರಿ ಸ್ಥಾನದ ಆಮಿಷವೊಡ್ಡಿದರು ಎಂದು ಹೇಳಿದರು
ಮಂತ್ರಿಸ್ಥಾನ ದ ಜತೆಗೆ ಮೂವತ್ತು ಕೋಟಿ ರೂಪಾಯಿ ನೀಡುತ್ತೇವೆ ಎಂದು ಹೇಳಿ ತಮ್ಮ ಮನೆಯಲ್ಲಿ ಐದು ಕೋಟಿ ರೂಪಾಯಿ ಇಟ್ಟು ಹೋದರು. ಈ ವಿಷಯವಾಗಿ ತಾವು ಸುಳ್ಳು ಹೇಳುತ್ತಿಲ್ಲ ಯಾವುದೇ ವೇದಿಕೆಯಲ್ಲಿ ಇದನ್ನು ಬಹಿರಂಗವಾಗಿ ಹೇಳಲು ಸಿದ್ಧ ಎಂದು ತಿಳಿಸಿದರು.
ನಾನು ಹೆಸರಿಸುತ್ತಿರುವ ಇಬ್ಬರು ಶಾಸಕರು ಈ ಸದನದಲ್ಲಿ ಇದ್ದಾರೆ ಅವರೆ ಈ ಬಗ್ಗೆ ಸ್ಪಷ್ಟನೆ ನೀಡಲಿ. ಈ ವಿಷಯವಾಗಿ ತಾವು ಯಾವುದೇ ತನಿಖೆ ಬೇಕಾದರೂ ಎದುರಿಸಲು ಸಿದ್ದನಿದ್ದೇನೆ ಎಂದು ಹೇಳಿದರು. ಈ ಬಗ್ಗೆ ನಾನು ಬಹಳ ಜನಕ್ಕೆ ಹಿಂದೆಯೂ ಹೇಳಿದ್ದೇನೆ. ಅಲ್ಲದೆ 30 ಕೋಟಿ ಕೊಡುತ್ತೇವೆ ಬರುತ್ತೀರಾ ಎಂದು ಬಿಜೆಪಿಯವರು ನನ್ನ ಕೇಳುತ್ತಿದ್ದಾರೆ. ಇದಕ್ಕಾಗಿ ಜನ ನಮಗೆಲ್ಲಾ ವೋಟ್ ಹಾಕಿರೋದು? ಯಾವ ಅಧಿಕಾರಕ್ಕೆ ಜನ ಮತ ಹಾಕಿದ್ದಾರೆ? 224 ಮಂದಿ ಇಂದು ನಾವು ಇಲ್ಲಿ ಇದ್ದೇವೆ. ನಾನು ಕೂಡ ಒಬ್ಬ ಮಂತ್ರಿಯಾಗಿದ್ದವನು. ಏನು ಬೆಲೆ ಕಟ್ಟಿ ಖರೀದಿಸಲು ಹೊರಟ್ಟಿದ್ದೀರಾ? ಇವತ್ತು ಯಾರು ಯಾರು ಪಕ್ಷ ಬಿಟ್ಟು ಹೋಗಿದ್ದಾರೆ. ಎಷ್ಟೆಷ್ಟು ಹಣ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಕೂಡಬೇಕಾದರೆ ನಾನು ಹೇಳುತ್ತೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂತಹ ಪರಿಸ್ಥಿತಿಯಲ್ಲಿ ಯಾಕೆ ಬೇಕು ಸರ್ಕಾರ ನಿಮಗೆ? ಅರ್ಥ ಮಾಡಿಕೊಳ್ಳಿ, ಎಷ್ಟು ದಿನ ಇರಬಹುದು ನಾವು? ಒಂದು ದಿನ ಎಲ್ಲರೂ ಸಾಯುತ್ತೇವೆ. ಈ ಸ್ಥಿತಿಗೆ ಯಾಕೆ ಮಹತ್ಮಾಗಾಂಧಿ ಅವರು ಪ್ರಜಾಪ್ರಭುತ್ವ ಕೊಡಿಸಬೇಕಿತ್ತು ಈ ದೇಶಕ್ಕೆ? ನಾವು ಅದರಲ್ಲಿ ಬದುಕಬೇಕಾಗಿತ್ತಾ? ಇಂತಹ ಬೆಳವಣಿಗೆಗಳು ಮನಸ್ಸಿಗೆ ನೋವಾಗುತ್ತದೆ. ಅವರು ನನಗೆ ಆಫರ್ ಮಾಡಿದ್ದು ನಿಜ. ಅವರೇನಾದರು ಇಲ್ಲ ಎನ್ನಲಿ, ಆಗ ನಾನು ಅವರಿಗೆ ಉತ್ತರ ನೀಡುತ್ತೇನೆ ಎಂದು ಬಿಜೆಪಿಗೆ ಪ್ರಶ್ನೆಹಾಕಿದರು.
ಅದರೆ ಈ ವೇಳೆ ಸದನದಲ್ಲಿ ಹಾಜರಿದ್ದ ಬಿಜೆಪಿಯ ಎಸ್ ಅರ್‌ ವಿಶ್ವನಾಥ್ ಮತ್ತು ಅಶ್ವಥ್ ನಾರಾಯಣ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದು ಗಮನ ಸೆಳೆಯಿತು.


ಸಂಬಂಧಿತ ಟ್ಯಾಗ್ಗಳು

Srinivas Gowda JDS BJP Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ