ಕೆಲವರಿಗೆ ಮಾನ, ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ: ಕುಮಾರಸ್ವಾಮಿ

Is some MLAs have some respect or not: CM Kumaraswamy

18-07-2019

ಜೆಡಿಎಸ್-ಕಾಂಗ್ರೆಸ್‍ನ ಕೆಲವು ಶಾಸಕರು ಸ್ಪೀಕರ್ ಅವರಿಗೆ ಒಂದು ಸಾಲಿನಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸುವಾಗ ಕರ್ನಾಟಕ ಸರ್ಕಾರದಲ್ಲಿ ಐಎಂಎ, ಜೆಎಸ್‍ಡಬ್ಲ್ಯು ಭೂಮಿ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿವೆ. ಸ್ಥಿರ ಸರ್ಕಾರ ಇಲ್ಲ ಎಂದು ಆರೋಪಿಸಿದ್ದಾರೆ.

ಕೆಲವರಿಗೆ ಮಾನ, ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಮಾನ, ಮರ್ಯಾದೆ ಇದೆ. ನಮ್ಮ ಶಾಸಕರು, ಸಚಿವರು ಮಾನ, ಮರ್ಯಾದೆಯೊಂದಿಗೆ ಬದುಕುತ್ತಿದ್ದಾರೆ. ಬಿಜೆಪಿಯವರು ಸಮ್ಮಿಶ್ರ ಸರ್ಕಾರದ ಮೇಲಷ್ಟೇ ಅಪನಂಬಿಕೆ ಬರುವಂತಹ ವಾತಾವರಣ ನಿರ್ಮಿಸಿಲ್ಲ, ಪವಿತ್ರ ಸ್ಪೀಕರ್ ಹುದ್ದೆ ಮೇಲೂ ಅಪನಂಬಿಕೆ ಬರುವಂತೆ ನಡೆದುಕೊಂಡಿದ್ದಾರೆ. ನಿಮಗೆ ರಾಜೀನಾಮೆ ನೀಡಿ ಅದರ ಅಂಗೀಕಾರಕ್ಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇವೆಲ್ಲವನ್ನು ಚರ್ಚೆ ಮಾಡಬೇಕೇ, ಬೇಡವೇ? ನಾನು ನಾಲ್ಕೈದು ತಿಂಗಳಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ನನ್ನ ಭಾವನೆಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಇರುವುದು ಈ ವೇದಿಕೆ ಮಾತ್ರ. ಇಲ್ಲಿ ಮಾತನಾಡಲು ಸಮಯ ಕಡಿವಾಣ ಹಾಕುವುದು ಬೇಡ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.

ಜನಸಾಮಾನ್ಯರಲ್ಲಿ ರಾಜಕೀಯದ ಅಸಹ್ಯ ಹುಟ್ಟಿಸುವಂತಹ ನಡವಳಿಕೆಗಳನ್ನು ಅನುಸರಿಸಲಾಗುತ್ತಿದೆ. ಕಳೆದ 14 ತಿಂಗಳಿನಿಂದಲೂ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ಯಾರು? ಈಗಿನ ಪರಿಸ್ಥಿತಿಗೆ ಕಾರಣರು ಯಾರು? ಸುಪ್ರೀಂಕೋರ್ಟ್‍ಗೆ ಅತೃಪ್ತ ಶಾಸಕರ ಮೂಲಕ ಕರ್ನಾಟಕದಲ್ಲಿ ಸ್ಥಿರ ಸರ್ಕಾರ ಇಲ್ಲ ಎಂದುಹೇಳಿಸಿದವರು ಯಾರು? ಎಂಬೆಲ್ಲ ವಿಷಯಗಳನ್ನು ಚರ್ಚೆ ಮಾಡಬೇಕಿದೆ.

ಪ್ರಧಾನಿಯವರು ಕರ್ನಾಟಕಕ್ಕೆ ಬಂದಾಗ ಕಲಬೆರಕೆ ಸರ್ಕಾರ, ಗರಿಷ್ಠ ಸರ್ಕಾರ ಬೇಕು, ಅಧಿಕಾರಕ್ಕಾಗಿ ತಲೆ ಒಡೆಯುವ ಸರ್ಕಾರ ಬೇಕಾ ಎಂಬೆಲ್ಲ ಮಾತುಗಳನ್ನಾಡಿದ್ದಾರೆ. ನಮ್ಮ ಸರ್ಕಾರ ಬರಗಾಲ, ಕೊಡಗಿನ ಅತಿವೃಷ್ಟಿ ಪರಿಸ್ಥಿತಿಯಲ್ಲಿ ಯಾವ ರೀತಿ ಸ್ಪಂದಿಸಿದೆ ಎಂದು ನಾವು ಜನರ ಮುಂದಿಡಬೇಕು. ಬರ ಪರಿಸ್ಥಿತಿ ಬಗ್ಗೆ ಯಡಿಯೂರಪ್ಪ ಪ್ರವಾಸ ಮಾಡಿ ನಮಗಿಂತಲೂ ಹೆಚ್ಚು ತಿಳಿದುಕೊಂಡಿದ್ದಾರಂತೆ. ಅದಕ್ಕೆ ಪ್ರತಿಯಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ಹೇಳಬೇಕು ಎಂದು ಕುಮಾರಸ್ವಾಮಿ ಹೇಳಿದರು.


ಸಂಬಂಧಿತ ಟ್ಯಾಗ್ಗಳು

H D Kumaraswami BJP Congress JDS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ