‘ಸದನದಲ್ಲಿ ಜೆಡಿಎಸ್ - ಕಾಂಗ್ರೆಸ್ ಮ್ಯಾಚ್ ಫಿಕ್ಸಿಂಗ್’

CT Ravi Statement

18-07-2019

ಬೆಂಗಳೂರು: ಸದನದಲ್ಲಿ ಮೈತ್ರಿ ಸದಸ್ಯರ ಸಂಖ್ಯೆ 98 ಕ್ಕೆ ಕುಸಿದಿದ್ದು, ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಾಗಿ ವಿಶ್ವಾಸಮತ ಯಾಚನೆಯನ್ನು ಮುಂದೂಡುವ ಪ್ರಯತ್ನ ಮಾಡಲಾಗಿದ್ದು, ಸದನವನ್ನು ಎಳೆದಾಡುವ ಪ್ರಯತ್ನ ನಡೆದಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಜೆಡಿಎಸ್ ಕಾಂಗ್ರೆಸ್ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಹೀಗಾಗಿಯೇ ಪಾಯಿಂಟ್ ಆಫ್ ಆರ್ಡರ್ ಅಡಿ ಚರ್ಚೆಗೆ ಹೆಚ್ಚು ಅವಕಾಶ ನೀಡಲಾಗಿದ್ದು, ಇಲ್ಲಿಯವರೆಗೆ ಇಂತಹ ಅನಾವಶ್ಯಕ ಚರ್ಚೆಯನ್ನು ಸದನದಲ್ಲಿ ನೋಡಿಯೇ ಇಲ್ಲ. ರಾಜ್ಯದ ಜನರು, ಸುಪ್ರಿಂಕೋರ್ಟ್ ಹಾಗೂ ರಾಜ್ಯಪಾಲರು ಸರ್ಕಾರಕ್ಕೆ ಬಹುಮತವಿಲ್ಲದ್ದನ್ನು ಗಮನಿಸಿದ್ದು, ರಾಜಪಾಲರ ಸಿಬ್ಬಂದಿ ಕಲಾಪವನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಶಾಸಕರನ್ನು ವಾಪಸು ಕರೆತರುವಲ್ಲಿ 15 ದಿನ ಸರ್ಕಸ್ ಮಾಡಿರುವ ಸರ್ಕಾರ ಈಗ ಮತ್ತೆ ವಿಶ್ವಾಸಮತ ಮುಂದೂಡುವ ವ್ಯರ್ಥ ಪ್ರಯತ್ನಕ್ಕೆ ಕೈಹಾಕಿದೆ. ಬಹುಮತ ಇಲ್ಲದವರಿಗೆ ಸರ್ಕಾರ ನಡೆಸಲು ಬಿಡುವುದಿಲ್ಲ. ಕಾದು ನೋಡಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ಮೇಲೆಯೇ 3 ಗಂಟೆ ಚರ್ಚೆ ಆಗಿದೆ. ಸ್ಪೀಕರ್ ಸಹ ಸರ್ಕಾರದ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಸರ್ಕಾರ ಮತ್ತೆ ಶಾಸಕರನ್ನು ಮನವೊಲಿಸಿ ಬಹುಮತ ಪಡೆಯುವವರೆಗೂ ಸದನದ ಸಮಯವನ್ನು ವ್ಯರ್ಥಗೊಳಿಸುವ ತಂತ್ರರೂಪಿಸಿದೆ. ಸರ್ಕಾರದ ಈ ನಡೆಯ ವಿರುದ್ಧ ಪಕ್ಷ ಕಾನೂನು ಕ್ರಮ ಕೈಗೊಳ್ಳಲಿದೆ. ಬಿಜೆಪಿಯ ಮುಂದೆ ಎಲ್ಲಾ ಹಾದಿಗಳು ಮುಕ್ತವಾಗಿವೆ. ಸಂವಿಧಾನವೇ ದೇವರು ಎನ್ನುವ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಕಾದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Session JDS Trust Vote CT Ravi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ