ನಾನು ಸೂಪರ್ ಸಿಎಂ ಅಲ್ಲ: ಎಚ್.ಡಿ.ರೇವಣ್ಣ

HD Revanna Statement

17-07-2019

ಬೆಂಗಳೂರು: ನಾನು ಯಾವುದೇ ಇಲಾಖೆಯ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡಿಲ್ಲ, ಲೋಕೋಪಯೋಗಿ ಇಲಾಖೆ ಬಿಟ್ಟು ಇತರೆ ಇಲಾಖೆಗಳತ್ತ ಗಮನಹರಿಸಿಲ್ಲ ಈ ವಿಷಯವಾಗಿ ತಮ್ಮ ‌ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸಚಿವ ರೇವಣ್ಣ‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ. ಬೇರೆ ಯಾವುದೇ ಇಲಾಖೆಯಲ್ಲೂ ಕೂಡ ನಾನು ಮಧ್ಯಪ್ರವೇಶ ಮಾಡಿಲ್ಲ. ನನ್ನ ಇಲಾಖೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಅದು ಬಿಟ್ಟು ಬೇರೆಯವರ ವಿಚಾರದಲ್ಲಿ ನಾನೇನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಮಾಡಿದ ತಪ್ಪು ಅಂದರೆ ಕನ್ನಡ ಶಾಲೆ ಬೇಕು ಎಂದು ಹೇಳಿ ಬಡ ಮಕ್ಕಳಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭಿಸಲು ಮನವಿ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರು ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗೆ ಸಂಬಂಧಿಸಿದ ಕೆಲಸವನ್ನಷ್ಟೇ ಮಾಡಿದ್ದೇನೆ. ಅದು ಬಿಟ್ಟು ಬೇರೆಯವರ ಇಲಾಖೆಯ ವಿಚಾರದಲ್ಲಿ ನಾನೇನು ಮಾಡಿಲ್ಲ. ಔಟರ್ ರಿಂಗ್ ರೋಡ್ ಕೆಲಸಕ್ಕೆ ಹಣವನ್ನು ಬಿಡುಗಡೆ ಮಾಡಿದ್ದು, ಈ ಹಿಂದೆ ನಾನು ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಆರಂಭ ಮಾಡಿ ಪೂರ್ಣ ಮಾಡದ ಕೆಲಸಗಳನ್ನು ಪೂರ್ಣ ಮಾಡಲು ಹಣ ಬಿಡುಗಡೆ ಮಾಡಿದ್ದೇನೆ‌ ಎಂದರು.

ಅಭಿವೃದ್ಧಿ ಸಂಬಂಧ ಶಾಸಕರ ಜೊತೆ ಸಭೆ ಕರೆಯಲಾಗಿತ್ತು, ಸಿಎಂ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೆ. ಆದರೆ ನನ್ನ ಮೇಲೆ ಆರೋಪ ಮಾಡಲಾಗಿದೆ. ನಾವು ಶಾಸಕರ ಮನಸ್ಸಿಗೆ ನೋವುಂಟು ಮಾಡಿಲ್ಲ, ಒಂದೊಮ್ಮೆ ತಿಳಿಯದೆ ಮಾಡಿದ್ದರೆ ಕ್ಷಮೆಯಾಚನೆ ಮಾಡಲಿದ್ದೇವೆ ಎಂದು ಹೇಳಿದರು.

ನನ್ನ ಕ್ಷೇತ್ರದಲ್ಲಿ ನಡೆಯಬೇಕಾದ ವರ್ಗಾವಣೆಗಳ ಸಂಬಂಧ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದು, ಇದುವರೆಗೂ ಬೇರೆ ಯಾವುದೇ ಇಲಾಖೆಯಲ್ಲೂ ವರ್ಗಾವಣೆ ಮಾಡಲು ಕೈ ಹಾಕಿಲ್ಲ. ನಾನು ಯಾವುದೇ ಇಲಾಖೆಯಲ್ಲಿ ಮಧ್ಯ ಪ್ರವೇಶ ಮಾಡಿಲ್ಲ, ಶಾಸಕರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದರು.

ಮಾಧ್ಯಮಗಳು ನನ್ನನ್ನು ‘ಸೂಪರ್ ಸಿಎಂ’ ಎಂದು ಕರೆಯುತ್ತಾರೆ. ಅದನ್ನು ನಿಮ್ಮ ಆಶೀರ್ವಾದ ಎಂದು ಹೇಳಿ ಸುಮ್ಮನೆ ಆಗಿದ್ದೇನೆ. ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದು, ಒಬ್ಬರನ್ನು ಕರೆತಂದು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೆ. ಆ ರಾಜ್ಯಸಭಾ ಸದಸ್ಯನನ್ನು ದೇವಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

HD Revanna Minister HD Kumaraswamy Government Crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ