ಎಸ್ ಐ ಟಿ ವಿಚಾರಣೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಬೇಗ್

SIT arrests former minister Roshan Baig

16-07-2019

ಬೆಂಗಳೂರು: ಐಎಂಎ ವಂಚನೆ ಸಂಬಂಧ ಮಾಜಿ ಸಚಿವ ಹಾಗೂ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ವಿಶೇಷ ತನಿಖಾ ದಳ(ಎಸ್‍ಐಟಿ)ದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇದನ್ನು ಪ್ರಸ್ನಿಸಿ ರೋಷನ್‍ಬೇಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಿಚಾರಣೆಗೆ ಕಾಲಾವಕಾಶ ಕೇಳಿದ್ದರೂ ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ರೋಶನ್ ಬೇಗ್ ಪರ ವಕೀಲರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ರಾತ್ರಿ ಮುಂಬೈಗೆ ಹೊರಡಲು ವಿಮಾನ ಹತ್ತಿದ್ದ ರೋಷನ್ ಬೇಗ್‍ ವಶಕ್ಕೆ ತೆಗೆದುಕೊಂಡಿರುವ ಎಸ್‍ಐಟಿ  ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದು ಐಎಂಎ ಸಂಸ್ಥೆಯ ವಂಚನೆ ಸಂಬಂಧ ಮಾಹಿತಿ ಸಂಗ್ರಹಿಸತೊಡಗಿದ್ದಾರೆ.

ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ನನಗೆ ಗೊತ್ತಿಲ್ಲ ಎಂದು ಬೇಗ್ ಹೇಳುತ್ತಿದ್ದಾರೆ. ನಿಮಗೆ ಐಎಂಎ ಮಾಲೀಕ ಮನ್ಸೂರ್‍ಖಾನ್ ಗೊತ್ತಾ,ಆತನ ಜೊತೆ ಹಣಕಾಸು ವ್ಯವಹಾರ ಹೊಂದಿರುವ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಗೊತ್ತಿಲ್ಲ ಎನ್ನುತ್ತಿರುವ ಬೇಗ್ ಅವರನ್ನು ಮನ್ಸೂರ್ ವಿಡಿಯೋದಲ್ಲಿ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ಕೇಳತೊಡಗಿದ್ದಾರೆ.

ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿ ಮಧ್ಯರಾತ್ರಿ ನೀವು ವಿಮಾನದಲ್ಲಿ ಹೊರಟಿದ್ದು ಎಲ್ಲಿಗೆ, ದೇಶ ಬಿಡುವ ಯೋಜನೆ ನಿಮಗಿತ್ತಾ, ವಿಶೇಷ ವಿಮಾನವನ್ನು ಬುಕ್ ಮಾಡಿದ್ದು ನೀವೇ ಅಥವಾ ಬೇರೆಯವರಾ ಇನ್ನಿತರ ಪ್ರಶ್ನೆಗಳನ್ನಿಟ್ಟುಕೊಂಡು ರೋಷನ್ ಬೇಗ್ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಮನ್ಸೂರ್ ಖಾನ್‍ನಿಂದ ಕೋಟ್ಯಂತರ ರೂಪಾಯಿ ಹಣ ಜಮಾವಣೆಯಾಗಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಬೇಗ್ ನನ್ನ ಪತ್ರಿಕೆಗೆ ಸಂಬಂಧ ಪಟ್ಟಂತೆ ಹಣ ವ್ಯವಹಾರ ಆಗಿರಬಹುದು ಎಂದು ಹೇಳಿದ್ದಾರೆ. ನಿಮ್ಮ ಮಗನ ಮದುವೆಗೆ ಚಾರ್ಟೆಡ್ ವಿಮಾನವನ್ನು ಮನ್ಸೂರ್ ಬುಕ್ ಮಾಡಿದ ಪ್ರಶ್ನೆಗೆ ಉತ್ತರಿಸಿದ ಬೇಗ್, ನನಗೆ ಸರಿಯಾಗಿ ನೆನಪಿಲ್ಲ ಸಾಕಷ್ಟು ವರ್ಷಗಳಾಗಿವೆ ಎಂದಿದ್ದಾರೆ.

ಮನ್ಸೂರ್ ಚಾರ್ಟೆಡ್ ವಿಮಾನವನ್ನು ಬುಕ್ ಮಾಡಿರೋದಕ್ಕೆ ದಾಖಲೆಗಳಿವೆ ಎಂದು ಕೇಳಿದ್ದಕ್ಕೆ ಸ್ನೇಹದಿಂದ ವಿಮಾನ ಬುಕ್ ಮಾಡಿರಬಹುದು. ಹಾಗಂದ ಮಾತ್ರಕ್ಕೆ ಆತನ ವ್ಯವಹಾರದಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ.

ಪರಾರಿಯಾಗುವ ಮುನ್ನ  ಐಎಂಎ ಮಾಲೀಕ ಮನ್ಸೂರ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ರೋಷನ್‍ಬೇಗ್ ಹೆಸರು ಪ್ರಸ್ತಾಪಿಸಿ ನನ್ನ ಬಳಿ ನೂರಾರು ಕೋಟಿ ಪಡೆದಿದ್ದಾರೆ ಎಂದು ಆರೋಪಿಸಿದ್ದು ಅಲ್ಲಿಂದ ಬೇಗ್ ಅವರ ಪ್ರತಿಯೊಂದು ನಡೆಯ ಮೇಲೂ ಎಸ್‍ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದರು ನಿನ್ನೆ ಕಾಲಾವಕಾಶ ಕೇಳಿದ ರೋಷನ್ ಬೇಗ್ ಮುಂಬೈಗೆ ಹೋಗುತ್ತಿರುವ ಮಾಹಿತಿಯನ್ನು ಕಲೆ ಹಾಕಿತ್ತು.

ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಬೇಗ್ ಬೆನ್ನು ಬಿದ್ದ ಎಸ್‍ಐಟಿ ಅಧಿಕಾರಿಗಳನ್ನು ದಿಕ್ಕು ತಪ್ಪಿಸಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿದ್ದರು ಆದರೂ ಬೆಂಬಿಡದ ಅಧಿಕಾರಿಗಳು ವಿಮಾನದಲ್ಲಿಯೇ ಬೇಗ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

SIT Arrest Roshan Baig IMA Jewels


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ