ಅವಕಾಶ ಸಿಕ್ಕರೂ ಬಿಎಸ್ ವೈ ‘ವಿಶ್ವಾಸ’ ಗಳಿಸೋದು ಸುಲಭವಲ್ಲ!

Karnataka Crisis

16-07-2019

ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿದರೂ ತದ ನಂತರ ಸಿಎಂ ಆಗಿ ಪ್ರಮಾಣ ವಚನ ಪಡೆಯುವ ಯಡಿಯೂರಪ್ಪ ತಮಗಿರುವ ಬಹುಮತವನ್ನು ಸಾಬೀತುಪಡಿಸಲು ಸೋಲುತ್ತಾರೆಯೇ? ಎಂಬ ಆತಂಕ ಬಿಜೆಪಿಯ ಹಿರಿಯ ನಾಯಕರಲ್ಲಿ ಕಾಣಿಸಿಕೊಂಡಿದೆ.

ಅದರ ಪ್ರಕಾರ ರಾಜೀನಾಮೆ ನೀಡಿರುವ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಕುಮಾರಸ್ವಾಮಿ ಅವರ ಸರ್ಕಾರ ಉರುಳುವುದು ನಿಶ್ಚಿತ. ಆದರೆ ಸರ್ಕಾರ ಉರುಳಿದ ನಂತರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಯಡಿಯೂರಪ್ಪ ತಮ್ಮ ಬಹುಮತವನ್ನು ಸಾಬೀತುಪಡಿಸಲು ಅಗೋಚರ ಕೈ ಕಾರಣವಾಗಲಿದೆಯೇ? ಎಂಬುದು ಹಲವು ನಾಯಕರ ಅನುಮಾನ.

ಕುಮಾರಸ್ವಾಮಿ ಅವರ ಸರ್ಕಾರ ಉರುಳುವ ಸನ್ನಿವೇಶ ನಿರ್ಮಾಣವಾಗಿದ್ದರೆ ಅದಕ್ಕೆ ಕೈ ಪಾಳೆಯದ ಪ್ರಮುಖ ಶಕ್ತಿಯೊಂದು ಮುಖ್ಯ ಕಾರಣ. ಯಾಕೆಂದರೆ ರಾಜೀನಾಮೆ ನೀಡಿರುವ ಶಾಸಕರ ಪೈಕಿ ಅನೇಕರು ಅವರ ಬೆಂಬಲಿಗರು.

ಹೀಗಿರುವಾಗ ಸರ್ಕಾರ ಬೀಳಿಸಿದ ಮೇಲೆ ಈ ಅಗೋಚರ ಶಕ್ತಿ ಯಾವ  ಆಟ ಆಡುತ್ತದೆ? ಎಂಬ ಕುರಿತು ಗೊಂದಲ ಬಗೆಹರಿಯುತ್ತಿಲ್ಲ. ಆ ಶಕ್ತಿ ಬಯಸಿದರೆ ಕೆಲ ಶಾಸಕರ ರಾಜೀನಾಮೆ ಅಂಗೀಕಾರವಾಗದಂತೆ ನೋಡಿಕೊಳ್ಳಬಹುದು.

ಹೀಗೆ ಕೆಲ ಶಾಸಕರ ರಾಜೀನಾಮೆ ಅಂಗೀಕಾರವಾಗದಿದ್ದರೆ ಯಡಿಯೂರಪ್ಪ ಅವರು ಕೂಡಾ ಸಿಎಂ ಆದ ಮೇಲೆ ಬಹುಮತಯಾಚನೆ ಮಾಡುವ ಸಂದರ್ಭದಲ್ಲಿ ಈ ಶಾಸಕರು ಮತ ಚಲಾಯಿಸುವ ಹಕ್ಕು ಪಡೆದಿರುತ್ತಾರೆ.

ಆಗ ಈ ಶಾಸಕರು ಯಡಿಯೂರಪ್ಪ ಅವರ ಸಂಪುಟದಲ್ಲಿ ಮಂತ್ರಿಗಳಾಗಲಿ ಎಂದು ಆ ಶಕ್ತಿ ಬಯಸಿದರೆ ಒಂದರ್ಥದಲ್ಲಿ ಅದು ಈ ಹಿಂದಿದ್ದ ಸರ್ಕಾರದಲ್ಲಿನ ಮಂತ್ರಿ ಮಂಡಲದ ಒಂದು ಭಾಗವೇ ಆಗಲಿದೆ.

ಹೀಗೆ ತಮಗೆ ಇಷ್ಟವಿಲ್ಲದ ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿ ಯಡಿಯೂರಪ್ಪ ಅವರ ಸರ್ಕಾರ ಕೆಲ ಕಾಲದವರೆಗಾದರೂ ಉಳಿಯುವಂತೆ ಮಾಡಿದರೆ ಅದು ಬೇರೆ ಮಾತು. ಆದರೆ ಒಂದು ವೇಳೆ ಯಡಿಯೂರಪ್ಪ ಅವರು ಬಹುಮತಯಾಚಿಸುವ ಸಂದರ್ಭದಲ್ಲಿ ಉಲ್ಟಾ ಹೊಡೆದರೆ ಯಡಿಯೂರಪ್ಪ ಅವರ ಸರ್ಕಾರದ ಗತಿ ಏನಾಗುತ್ತದೆ? ಎಂಬುದು ಬಿಜೆಪಿ ನಾಯಕರ ಅನುಮಾನ.

ಹಾಗೇನಾದರೂ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಅನುಮಾನವೇ ಬೇಡ. ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಯಾವ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ಶಾಸಕರು ಮಧ್ಯಂತರ ಚುನಾವಣೆಯನ್ನು ಬಯಸುತ್ತಿಲ್ಲ.

ಆದರೆ ಎರಡು ದಿನಗಳ ಹಿಂದೆ ಹಿರಿಯ ನಾಯಕ ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ ಅವರು ದೆಹಲಿಗೆ ಹೋಗಿ ವರಿಷ್ಟರ ಬಳಿ ರಾಜ್ಯರಾಜಕೀಯದ ವಿವರ ನೀಡುವಾಗ, ಈ ಬಾರಿ ಯಡಿಯೂರಪ್ಪ ಸಿಎಂ ಆಗಿ ಬಹುಮತ ಸಾಬೀತುಪಡಿಸಲು ವಿಫಲರಾದರೆ ಮಧ್ಯಂತರ ಚುನಾವಣೆಗೆ ಅಣಿಯಾಗಿ ಎಂದು ಅಮಿತ್ ಷಾ ಹೇಳಿರುವುದು ರಾಜ್ಯ ಬಿಜೆಪಿ ನಾಯಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

  


ಸಂಬಂಧಿತ ಟ್ಯಾಗ್ಗಳು

BS Yediyurappa Karnataka Crisis BS Yediyurappa Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ