ಸಿಲಿಂಡರ್ ನಿಂದ ಹೊಡೆದು ಪತ್ನಿ ಕೊಲೆ: ಪರಾರಿಯಾದ ಪತಿ ಬಂಧನ

Murder

15-07-2019

ಬೆಂಗಳೂರು: ಪತ್ನಿಯ ತಲೆಗೆ ಖಾಲಿ ಸಿಲಿಂಡರ್‍ನಿಂದ ಹೊಡೆದು ಕೊಲೆಗೈದು, ಪರಾರಿಯಾಗಿದ್ದ ಪತಿಯನ್ನು ತಮಿಳುನಾಡಿನ ಧರ್ಮಾವರಂನಲ್ಲಿ ಬಂಧಿಸುವಲ್ಲಿ ಮೈಕೋ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಕೋ ಲೇಔಟ್ ಬಿಳೇಕಳ್ಳಿಯ ಉಮಾರಾಣಿ (30) ಅವರನ್ನು ನಾಲ್ಕು ದಿನಗಳ ಹಿಂದೆ (ಜು. 12 ರಂದು) ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಚಿನ್ನಸ್ವಾಮಿ (35)ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿ ಚಿನ್ನಸ್ವಾಮಿ ಹಾಗೂ ಉಮಾರಾಣಿ ತಮಿಳುನಾಡಿನ ಮೂಲದವರಾಗಿದ್ದು, 12 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಸೇರಿ ಮೂವರು ಮಕ್ಕಳಿದ್ದಾರೆ. ಚಿನ್ನಸ್ವಾಮಿ, ಉಮಾರಾಣಿ 2ನೇ ಪತ್ನಿಯಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ದಂಪತಿ ಬಿಳೇಕಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡುತ್ತಿದ್ದರು.

ಉಮಾರಾಣಿ ಖಾಸಗಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ (ಹೌಸ್ ಕೀಪಿಂಗ್) ಮಾಡುತ್ತಿದ್ದರೆ, ಚಿನ್ನಸ್ವಾಮಿ ಗುಜರಿ ವ್ಯಾಪಾರ ಮಾಡುತ್ತಿದ್ದ. ಇತ್ತೀಚೆಗೆ ಕುಡಿತದ ಚಟ ಅಂಟಿಸಿಕೊಂಡಿದ್ದ ಆತ ಪ್ರತಿದಿನ ಕುಡಿದು ಬಂದು ಪತ್ನಿ ಜೊತೆಗೆ ಜಗಳವಾಡುತ್ತಿದ್ದ. ಕಳೆದ ಜುಲೈ 12 ರಂದು ರಾತ್ರಿ ಕುಡಿದು ಮನೆಗೆ ಬಂದ ಚಿನ್ನಸ್ವಾಮಿ ಪತ್ನಿ ಬಳಿ ತೆಗೆದ ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಚಿನ್ನಸ್ವಾಮಿ ಅಡುಗೆ ಮನೆಯಲ್ಲಿದ್ದ ಖಾಲಿ ಸಿಲಿಂಡರ್‍ನಿಂದ ಉಮಾರಾಣಿ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಕುಸಿದು ಬಿದ್ದಿದ್ದು, ಮಕ್ಕಳು ಚೀರಾಡಲು ಆರಂಭಿಸಿದ್ದಾರೆ.

ಇದರಿಂದ ಹೆದರಿದ ಆರೋಪಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ. ರಕ್ತಸ್ರಾವದಿಂದ ಉಮಾರಾಣಿ ಮೃತಪಟ್ಟಿದ್ದು, ಸುಮಾರು 2 ಗಂಟೆಗಳ ಕಾಲ ಮಕ್ಕಳು ಶವದ ಮುಂದೆ ಕುಳಿತು ಕಣ್ಣೀರು ಹಾಕಿದ್ದಾರೆ. ಮಕ್ಕಳ ಕಣ್ಣೀರಿನ ಶಬ್ಧ ಕೇಳಿದ ಅಕ್ಕ- ಪಕ್ಕದ ಮನೆಯವರು ಬೀಗ ಹೊಡೆದು ಒಳಹೋಗಿ ನೋಡಿದಾಗ ಉಮಾರಾಣಿ ಕೊಲೆಯಾಗಿದ್ದರು.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮೈಕೋ ಲೇ ಔಟ್ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ತಮಿಳುನಾಡಿನ ಧರ್ಮವರಂನಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Cylinder Arrest Murder Police case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ