ಒಂದೇ ಕಲ್ಲಲ್ಲಿ ಎರಡು ಹಕ್ಕಿ - ಅಮಿತ್ ಶಾ ಲೆಕ್ಕಾಚಾರ

Amitha Shah plan

15-07-2019

ಬೆಂಗಳೂರು: ಸಂಘ ಪರಿವಾರದಿಂದ ಪಕ್ಷದ ಕೆಲಸಕ್ಕಾಗಿ ನಿಯೋಜಿತರಾಗಿದ್ದ ಸಂತೋಷ್‌ಅವರನ್ನುಇದೀಗ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು ಆ ಮೂಲಕ ಯಡಿಯೂರಪ್ಪ ಇಲ್ಲಿಗೆ ಸಂತೋಷ್‌ ದಿಲ್ಲಿಗೆಎಂಬ ಸೂತ್ರ ಜಾರಿಗೆ ಬಂದಿದೆ.

ಇದುವರೆಗೆ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್‌ ಅವರನ್ನು ಸಂಘ ಪರಿವಾರದ ಕೆಲಸಕ್ಕಾಗಿ ವಾಪಸ್‌ ಕರೆಸಲಾಗಿದ್ದು, ಇದರಿಂದ ತೆರವಾದ ಸ್ಥಾನವನ್ನು ಸಂತೋಷ್‌ ಅವರಿಗೆ ನೀಡುವ ಮೂಲಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಒಂದೇ ಕಲ್ಲಿಗೆ ಎರಡು ಹಕ್ಕಿಹೊಡೆದಿದ್ದಾರೆ.

ಇದುವರೆಗೂ ಸಂಘಟನೆಯ ಜಂಟಿ ಪ್ರಧಾನಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್‌ ಅವರನ್ನುಇದೀಗ ರಾಮಲಾಲ್‌ ಅವರ ಜಾಗಕ್ಕೆ ನೇಮಕ ಮಾಡಿರುವ ಅಮಿತ್‌ ಷಾ, ಆ ಮೂಲಕ ಕರ್ನಾಟಕದ ರಾಜಕೀಯ ಚಿತ್ರ ಬದಲಾಗಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಮೊದಲನೆಯದಾಗಿ,ಕೈ ಚಳಕದ ಲಾಭ ಪಡೆದು ತಾವಾಡುತ್ತಿರುವ ಆಟ ಗುರಿ ತಲುಪಲಿದೆ ಎಂಬುದನ್ನುನಿಕ್ಕಿ ಮಾಡಿಕೊಂಡಿರುವ ಅಮಿತ್‌ ಷಾ, ಅದೇ ಕಾಲಕ್ಕೆ ಸಿಎಂ ಹುದ್ದೆಯ ಮೇಲೆ ಬಂದು ಕೂರುವ ಯಡಿಯೂರಪ್ಪ ಅವರಿಗೆ ಯಾವ ಅಡ್ಡಿಯೂ ಆಗಬಾರದು ಎಂಬ ಕಾರಣಕ್ಕಾಗಿ ಸಂತೋಷ್‌ ಅವರನ್ನು ದಿಲ್ಲಿ ನೆಲೆಗೆ ತಲುಪಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಸಂತೋಷ್‌ ಪಾರಂಪರಿಕ ಎದುರಾಳಿಗಳಂತಾಗಿದ್ದು, ಸಮ್ಮಿಶ್ರ ಸರ್ಕಾರಬೀಳಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೂ ಸಂತೋಷ್‌ಇಲ್ಲೇ ಇದ್ದರೆ ರಾಜ್ಯ ಬಿಜೆಪಿ ಮತ್ತೆ ಅಸ್ಥಿರಗೊಳ್ಳುತ್ತದೆ ಎಂಬುದು ಅಮಿತ್‌ ಷಾ ಲೆಕ್ಕಾಚಾರ.

ಹಿಂದಿನಿಂದಲೂ ಸಂತೋಷ್ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಯಡಿಯೂರಪ್ಪ ಹಲವು ಬಾರಿ ಪಕ್ಷದ ವರಿಷ್ಟರ ಬಳಿ ಸಂತೋಷ್‌ ಅವರ ವಿರುದ್ಧ ತಕರಾರು ತೆಗೆದುಕೊಂಡು ಹೋಗುತ್ತಲೇ ಇದ್ದರು. ಈಶ್ವರಪ್ಪ ಅವರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ತಲೆ ಎತ್ತುವಂತೆ ಮಾಡಿದವರೇ ಸಂತೋಷ್ . ಆ ಮೂಲಕ ಅವರು ರಾಜ್ಯ ಬಿಜೆಪಿಯನ್ನು ವಿಭಜಿಸುತ್ತಿದ್ದಾರೆ ಎಂದು ವರಿಷ್ಟರ ಬಳಿ ದೂರೊಯ್ದಿದ್ದರು.

ಅವರ ದೂರಿನ ಹಿನ್ನೆಲೆಯಲ್ಲಿಯೇ ಸಂತೋಷ್‌ ಅವರ ಪ್ರಭಾವವನ್ನು ಕಡಿಮೆಮಾಡಲು ಅರುಣ್‌ ಕುಮಾರ್‌ ಅವರನ್ನು ಕಳಿಸಲಾಗಿತ್ತಾದರೂ, ಅವರು ಸಂತೋಷ್‌ ಅವರ ಪ್ರಭಾವಳಿಯನ್ನು ನಿರೀಕ್ಷಿತ ಮಟ್ಟದಲ್ಲಿ ಕುಗ್ಗಿಸಲು ವಿಫಲರಾದರು.

ಈ ಮಧ್ಯೆ ಸದ್ಯದ ಆಪರೇಷನ್‌ ಕಮಲ ಕಾರ್ಯಾಚರಣೆ ಯಶಸ್ವಿಯಾಗುವ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬಿಜೆಪಿ ನೆಮ್ಮದಿಯಾಗಿರಬೇಕು ಎಂದರೆ ಸಂತೋಷ್‌ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಬೇಕು ಎಂದು ವರಿಷ್ಟರ ಮುಂದೆ ಬೇಡಿಕೆ ಮಂಡಿಸಿದ್ದರು ಎಂದು ಮೂಲಗಳು ಹೇಳಿವೆ. ಯಡಿಯೂರಪ್ಪ ಅವರ ಸತತ ವಾದ ಹಾಗೂ ತಾವೇ ತರಿಸಿದ ವರದಿಯ ಆಧಾರದ ಮೇಲೆವಿರುದ್ಧ ಧ್ರುವಗಳಂತಿರುವ ಯಡಿಯೂರಪ್ಪ ಹಾಗೂ ಸಂತೋಷ್‌ ಒಂದೇ ಕಡೆ ಇರುವುದು ಡೇಂಜರ್‌ ಎಂಬ ನಿರ್ಧಾರಕ್ಕೆ ಬಂದಿದ್ದಾರೆ

ಇದೇ ಕಾರಣಕ್ಕಾಗಿ ಯಡಿಯೂರಪ್ಪಇಲ್ಲಿಗೆ, ಸಂತೋಷ್‌ ದಿಲ್ಲಿಗೆ ಎಂಬ ಸೂತ್ರವನ್ನು ಜಾರಿಗೊಳಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಅವರು ಇದೀಗ ಸಂತೋಷ್‌ ಅವರನ್ನು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.

ಈ ಬೆಳವಣಿಗೆ ಯಡಿಯೂರಪ್ಪ ಅವರ ದಾರಿಗೆ ಇನ್ನು ಯಾವುದೇ ಅಡ್ಡಿಯಿಲ್ಲ ಎಂಬ ಸಂದೇಶ ರವಾನಿಸಿದ್ದರೆ, ಅದೇ ಕಾಲಕ್ಕೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳುವುದು ಬಹುತೇಕ ಖಚಿತ ಎಂಬ ಬಿಜೆಪಿ ವರಿಷ್ಟರ ಆತ್ಮವಿಶ್ವಾಸದ ಸಂಕೇತವೂ ಆಗಿದೆ.

 


ಸಂಬಂಧಿತ ಟ್ಯಾಗ್ಗಳು

Amitha Shah BS Yadiyurappa BJP Santosh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ