ರಕ್ಷಿಸಲು ಬಂದ ಪೊಲೀಸ್ ಗೆ ಹೊಡೆದು ಗಾಯಗೊಳಿಸಿದ್ಯಾಕೆ ಆತ?

Police

13-07-2019

ಬೆಂಗಳೂರು: ನಗರದ ಲಾಲ್‍ಬಾಗ್‍ನ ಪಶ್ಚಿಮದ್ವಾರದ ಬಳಿ ನಿನ್ನೆ ರಾತ್ರಿ ಅಪಘಾತದಲ್ಲಿ ಕೆಳಗೆ ಬಿದ್ದು ಗಾಯಗೊಂಡಿದ್ದ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿದ್ದ ಯುವಕನೊಬ್ಬ ರಕ್ಷಿಸಲು ಬಂದ ಪೊಲೀಸ್ ಮುಖ್ಯಪೇದೆಯ ತಲೆಗೆ ಹೆಲ್ಮೆಟ್‍ನಿಂದ ಹೊಡೆದು ಮೈ-ಕೈಯೆಲ್ಲಾ ಕಚ್ಚಿ ಗಾಯಗೊಳಿಸಿ ರಂಪಾಟ ಮಾಡಿದ ಘಟನೆ ನಡೆದಿದೆ.

ಅಮಲಿನಲ್ಲಿದ್ದ ಯುವಕನ ಹಲ್ಲೆಯಿಂದ ಗಾಯಗೊಂಡಿರುವ ಬಸವನಗುಡಿ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆ ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಪಾಟ ಮಾಡಿ ಗಾಯಗೊಂಡಿರುವ ತ್ಯಾಗರಾಜ ನಗರದ ವಿಜಯ್‍ಕುಮಾರ್‍ನನ್ನು ಬಸವನಗುಡಿ ಪೊಲೀಸರು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಅಮಲು ಇಳಿದ ನಂತರ ವಿಚಾರಣೆ ನಡೆಸಲಿದ್ದಾರೆ.

ಮದ್ಯ ಹಾಗೂ ಗಾಂಜಾ ಅಮಲಿನಲ್ಲಿ ಹೋಂಡಾ ಡಿಯೋ ಸ್ಕೂಟರ್‍ನಲ್ಲಿ ವೇಗವಾಗಿ ಹೋಗುತ್ತಿದ್ದ ವಿಜಯ್‍ಕುಮಾರ್, ಲಾಲ್‍ಬಾಗ್ ಪಶ್ಚಿಮದ್ವಾರದ ಬಳಿ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.

ಅಪಘಾತವನ್ನು ನೋಡಿದ ಮುಖ್ಯಪೇದೆ ಸುರೇಶ್ ಅವರು ಕೂಡಲೇ ಧಾವಿಸಿ ಕೆಳಗೆ ಬಿದ್ದಿದ್ದ ವಿಜಯಕುಮಾರ್ ಮುಖಕ್ಕೆ ನೀರು ಹಾಕಿ ಎಬ್ಬಿಸಲು ಹೋದಾಗ ಆಕ್ರೋಶಗೊಂಡ ಆತ, ಕೈಯಲ್ಲಿದ್ದ ಹೆಲ್ಮೆಟ್‍ನಿಂದ ಸುರೇಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸ್ಥಳೀಯರು ನೆರವಿಗೆ ಧಾವಿಸಿದ ಕೂಡಲೇ ಮತ್ತಷ್ಟು ಆಕ್ರೋಶಗೊಂಡ ಆತ ಸುರೇಶ್ ಮೈ-ಕೈನೆಲ್ಲ ಕಚ್ಚಿದ್ದಾನೆ. ರಕ್ಷಣೆಗೆ ಹೋದವರ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಎಲ್ಲರೂ ಸೇರಿ ಆತನನ್ನು ಹಿಡಿದು ಕೈ-ಕಾಲು ಕಟ್ಟಿ ಬಸವನಗುಡಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಠಾಣೆಯಲ್ಲೂ ಕೂಡ ರಂಪಾಟ ಮಾಡಿದ್ದು, ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಮಧ್ಯಾಹ್ನವಾದರೂ ಇನ್ನೂ ಆತನ ಅಮಲು ಇಳಿದಿಲ್ಲ. ಗಾಯಗೊಂಡಿರುವ ಸುರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಹಣೆಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police Hospital Accident Constable


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ