ಕೈ ಕೊಡೋಕೆ ರೆಡಿಯಾದ್ರಾ ಜೆಡಿಎಸ್ ಭಿನ್ನಮತೀಯರು?

Karnataka Government crisis

12-07-2019

ಬೆಂಗಳೂರು: ಸಮ್ಮಿಶ್ರ ಸರ್ಕಾರ ಗಂಡಾಂತರಕ್ಕೆ ಸಿಲುಕಿರುವ ಬೆನ್ನಲ್ಲೇ ಜೆಡಿಎಸ್ ಪಕ್ಷದಲ್ಲಿ ಭಿನ್ನಮತೀಯ ಬಣ ತಲೆ ಎತ್ತಿದ್ದು “ದೇವೇಗೌಡ ಫ್ಯಾಮಿಲಿ” ಗೆ ಕೈ ಕೊಟ್ಟು ಬಿಜೆಪಿಯ ಜತೆ ಕೈಗೂಡಿಸಿ ಸರ್ಕಾರ ರಚಿಸಲು ಮಾತುಕತೆ ಆರಂಭಿಸಿದೆ. ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿದ್ದು, ಜೆಡಿಎಸ್ ಭಿನ್ನರ ಧ್ವನಿಗೆ ಸಂಘಪರಿವಾರದ ನಾಯಕರು ಬಲವಾಗಿ ಬೆಂಬಲಿಸಿದ್ದಾರೆ ಎಂದಿವೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಂದಿರುವವರನ್ನು ಜತೆಗಿಟ್ಟುಕೊಂಡು ಸರ್ಕಾರ ರಚಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರಕ್ಕೂ ಇದೇ ಗತಿ ಬರುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದರೆ ಜೆಡಿಎಸ್ ನ ಭಿನ್ನಮತೀಯ ಬಣದ ಜತೆ ಕೈಗೂಡಿಸಿ ಸರ್ಕಾರ ರಚಿಸಬೇಕು ಎಂದು ಸಂಘಪರಿವಾರದ ನಾಯಕರು ವರಿಷ್ಟರಿಗೆ ವಿವರಿಸಿದ್ದಾರೆ.

ನಮಗೆ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವುದು ಮುಖ್ಯವೇ ಹೊರತು ಬೇರೇನಲ್ಲ. ಹೀಗಾಗಿ ಜೆಡಿಎಸ್ ನ ಭಿನ್ನರ ಜತೆ ಕೈಜೋಡಿಸಿದರೆ ಮುಂದಿನ ದಿನಗಳಲ್ಲಿ ನಮಗೆ ಬೇಕಾದ ಪರಿಸ್ಥಿತಿಯ ನಿರ್ಮಾಣವೂ ಆಗುತ್ತದೆ. ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿದಂತೆಯೂ ಆಗುತ್ತದೆ ಎಂದು ಈ ನಾಯಕರು ವರಿಷ್ಟರಿಗೆ ವಿವರಿಸಿದ್ದಾರೆ.

ಈ ಮಧ್ಯೆ ಸಂಘಪರಿವಾರದ ನಾಯಕರ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಹಿಂದೆ ನಮಗೆ ಅಧಿಕಾರ ಹಸ್ತಾಂತರಿಸದೆ ಕೈ ಕೊಟ್ಟವರು ಜೆಡಿಎಸ್ ನಾಯಕರು. ಹೀಗಾಗಿ ಅವರೊಂದಿಗೆ ಹೋಗುವುದರಲ್ಲಿ ಅರ್ಥವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗೊಂದು ವೇಳೆ ಜೆಡಿಎಸ್ ಜತೆ ಕೈ ಜೋಡಿಸುವುದೇ ಆದರೆ ದೇವೇಗೌಡರ ಕುಟುಂಬದ ಯಾವೊಬ್ಬ ಸದಸ್ಯರನ್ನೂ ಬಿಜೆಪಿಯ ಒಳಗೆ ಬಿಟ್ಟುಕೊಳ್ಳಬಾರದು ಎಂದು ಷರತ್ತು ಹಾಕಿದರು ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ ಸಂಘಪರಿವಾರದ ನಾಯಕರು ಚುರುಕಾಗಿದ್ದು ದೇವೇಗೌಡರ ಕುಟುಂಬ ಸದಸ್ಯರನ್ನು ಹೊರತುಪಡಿಸಿದ ಬಣದೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ಈ ಬಣದಲ್ಲಿ ಇಪ್ಪತ್ತೇಳು ಶಾಸಕರಿದ್ದಾರೆ ಎಂದು ಇವೇ ಮೂಲಗಳು ಹೇಳಿದ್ದು ನೇರವಾಗಿ ಅಲ್ಲದಿದ್ದರೂ ಸಿಎಂ ಕುಮಾರಸ್ವಾಮಿ ಅವರೇ ಈ ಬಣದ ಹಿಂದಿರುವ ಶಕ್ತಿ ಎಂದು ವಿವರಿಸಿವೆ.

ಅಂದ ಹಾಗೆ ಸಚಿವ ಸಾ.ರಾ.ಮಹೇಶ್ ಅವರು ಈ ತಂತ್ರದ ಭಾಗವಾಗಿಯೇ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಮುರುಳೀಧರರಾವ್ ಅವರನ್ನು ಭೇಟಿ ಮಾಡಿದ್ದನ್ನು ಅವು ಉಲ್ಲೇಖಿಸಿವೆ. ಕುತೂಹಲದ ಸಂಗತಿ ಎಂದರೆ ಬಿಜೆಪಿ ಹೈಕಮಾಂಡ್ ಕೂಡಾ ಈ ವಿಷಯದಲ್ಲಿ ರಹಸ್ಯ ಚರ್ಚೆ ಮುಂದುವರಿಸಿದ್ದು ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಉಳಿದಂತೆ ಜೆಡಿಎಸ್ ಶಾಸಕರು ನಮ್ಮ ಜತೆ ಕೈಗೂಡಿಸಲಿ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

JDS BJP Congress Crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ