ದೇವೇಗೌಡರ ಮುಂದಿದೆಯಂತೆ ಭರ್ಜರಿ ಆಫರ್..!

Karnataka Government crisis

12-07-2019

ಬೆಂಗಳೂರು: ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರದ ಡೆಡ್ ಲೈನ್ ನೀಡಿರುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಮತ್ತಷ್ಟು ಅತಂತ್ರವಾಗಿದ್ದು ಈ ಹಿನ್ನೆಲೆಯಲ್ಲಿ ಮಧ್ಯೆ ಪ್ರವೇಶಿಸಿರುವ ದೇಶದ ಪ್ರಮುಖ ನಾಯಕರೊಬ್ಬರು, ಸಿಎಂ ಹುದ್ದೆಯನ್ನು ತ್ಯಜಿಸಲು ಕುಮಾರಸ್ವಾಮಿ ಒಪ್ಪಿಕೊಂಡರೆ ಈ ಸರ್ಕಾರವನ್ನು ಉಳಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರ ಮುಂದೆ ಆಫರ್ ಇಟ್ಟಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಶಾಸಕರ ರಾಜೀನಾಮೆ ಪ್ರಕರಣವನ್ನು ಜುಲೈ 11 ರ ಗುರುವಾರ ಇತ್ಯರ್ಥಪಡಿಸುವಂತೆ ಸುಪ್ರೀಂಕೋರ್ಟ್ ಹೇಳಿತ್ತಾದರೂ, ಇದಕ್ಕೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿದ್ದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ, ಮಂಗಳವಾರದ ಡೆಡ್ ಲೈನ್ ನೀಡಿದೆಯಲ್ಲದೆ, ಅಲ್ಲಿಯವರೆಗೆ ಶಾಸಕರನ್ನು ಅನರ್ಹಗೊಳಿಸದಂತೆ ಮತ್ತು ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತೀರ್ಮಾನವನ್ನು ಕೈಗೊಂಡು ತನಗೆ ತಿಳಿಸುವಂತೆ ಹೇಳಿದೆ.

ಈ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ಒತ್ತಡ ಬಿದ್ದಿದ್ದು ಅಷ್ಟರೊಳಗಾಗಿ ಅವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕು. ಇಲ್ಲವೇ ಯಾವ ಕಾರಣಕ್ಕಾಗಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುತ್ತಿಲ್ಲ ಎಂದು ಹೇಳಬೇಕು.

ಆದರೆ ಶಾಸಕರ ರಾಜೀನಾಮೆ ಅಂಗೀಕರಿಸದೆ ಬೇರೆ ಕಾರಣಗಳನ್ನು ಅವರು ಮುಂದಿಟ್ಟರೆ ಸುಪ್ರೀಂಕೋರ್ಟ್ ಅದನ್ನು ಒಪ್ಪುವ ಲಕ್ಷಣಗಳಿಲ್ಲ. ಯಾಕೆಂದರೆ ರಾಜೀನಾಮೆ ನೀಡಿದ ಶಾಸಕರು ನಮ್ಮ ಸ್ವ ಇಚ್ಚೆಯಿಂದ ಮತ್ತು ಯಾರ ಪ್ರೇರಣೆಯೂ ಇಲ್ಲದೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ಹೀಗಾಗಿ ರಮೇಶ್ ಕುಮಾರ್ ಅವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕು.ಇಲ್ಲವೇ ಅಂಗೀಕರಿಸದೆ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಬೇಕು. ಹಾಗೇನಾದರೂ ಆದರೆ ನ್ಯಾಯಾಲಯ ಕಠಿಣ ಹೆಜ್ಜೆ ಇಡಲು ಮುಂದಾಗಬಹುದು.

ಹಾಗೇನಾದರೂ ಆದರೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮುಂದುವರಿಯುವುದು ಕಷ್ಟ. ಯಾಕೆಂದರೆ ಈಗಾಗಲೇ ಹಲ ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರಕ್ಕಿಂತ ಪ್ರತಿಪಕ್ಷ ಬಿಜೆಪಿಗೆ ಹೆಚ್ಚು ಶಾಸಕರ ಬೆಂಬಲವಿದೆ.

ಹೀಗಾಗಿ ಸರ್ಕಾರವನ್ನು ಉಳಿಸಿಕೊಳ್ಳುವ ಯಾವುದೇ ಯತ್ನ ಫಲಿಸುವುದಿಲ್ಲ. ಆದರೂ ಈ ಸರ್ಕಾರ ಉಳಿಯಬೇಕು ಎಂದರೆ ಕುಮಾರಸ್ವಾಮಿ ಅವರು ಸಿಎಂ ಪದವಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಲಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಹುದ್ದೆ ಬಿಟ್ಟುಕೊಡುವುದಾಗಿ ಹೇಳಲಿ. ಒಂದು ವೇಳೆ ಅವರು ತ್ಯಾಗಕ್ಕೆ ಸಜ್ಜಾದರೆ ಮತ್ತು ಸಿಎಂ ಹುದ್ದೆ ಕಾಂಗ್ರೆಸ್ ಗೆ, ಉಪಮುಖ್ಯಮಂತ್ರಿ ಹುದ್ದೆ ಜೆಡಿಎಸ್ ಗೆ ಎಂದು ಒಪ್ಪಿಕೊಂಡರೆ ಈ ಸರ್ಕಾರ ಉಳಿಸುವ ಜವಾಬ್ದಾರಿ ತಮ್ಮದು ಎಂದು ಈ ನಾಯಕರು ಮಾಜಿ ಪ್ರಧಾನಿ ದೇವೇಗೌಡರ ಮುಂದೆ ಆಫರ್ ಇಟ್ಟಿದ್ದಾರೆ.

ಅಂದ ಹಾಗೆ ಈ ಪ್ರಪೋಸಲ್ ಗೆ ಒಪ್ಪಿಗೆ ಇದ್ದರೆ, ನಿಮಗೆ ಬೇಕಾದವರನ್ನು ನೀವು ಸಿಎಂ ಮಾಡಿ, ನಮಗೆ ಬೇಕಾದವರನ್ನು ನಾವು ಡಿಸಿಎಂ ಮಾಡುತ್ತೇವೆ ಎಂಬ ಮಾತಿಗೆ ನೀವು ಕಟಿ ಬದ್ದರಾಗಬೇಕು ಎಂದೂ ಈ ನಾಯಕರು ವಿವರಿಸಿದ್ದಾರೆ.

ಒಂದು ವೇಳೆ ಈ ಪ್ರಪೋಸಲ್ಲಿಗೆ ಒಪ್ಪಿಗೆ ಸಿಗದಿದ್ದರೆ ಸರ್ಕಾರ ಪದಚ್ಯುತವಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ಬಿಜೆಪಿಯ ಜತೆ ಕೈಗೂಡಿಸಿ ಸರ್ಕಾರ ಉಳಿಸಿಕೊಳ್ಳುವ ಪ್ಲಾನು ಮಾಡಿದ್ದರೆ ಮಾಡಬಹುದು. ಆದರೆ ನಾನು ಹೇಳಿದ ಪ್ರಪೋಸಲ್ಲಿನ ಮಾದರಿಯಲ್ಲಿ ಪರ್ಯಾಯ ಸರ್ಕಾರ ರಚಿಸಬಹುದೇ ಹೊರತು ಇನ್ನೇನೂ ಮಾಡಲಾಗದು ಎಂದು ಈ ನಾಯಕರು ದೇವೇಗೌಡರಿಗೆ ವಿವರಿಸಿದ್ದಾರೆ.

ಆದರೆ ಮಂಗಳವಾರಕ್ಕೂ ಮುನ್ನ ಈ ವಿಷಯದಲ್ಲಿ ಜೆಡಿಎಸ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


ಸಂಬಂಧಿತ ಟ್ಯಾಗ್ಗಳು

H D Devegowda Government crisis HD Kumaraswamy Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ